ನವದೆಹಲಿ: ರಾಜ್ಯದಲ್ಲಿ ಶೀಘ್ರ ಮೂರು ಅತ್ಯಾಧುನಿಕ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಿಸಲಾಗುವುದು ಎಂದು ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ಡಿ.ಎಸ್ ವೀರಯ್ಯ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಡಿ.ಎಸ್ ವೀರಯ್ಯ ಅವರು, ರಾಜ್ಯದಲ್ಲಿ ಈಗಾಗಲೇ ನಾಲ್ಕು ಕಡೆ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಾಣ ಮಾಡಲಾಗಿದ್ದು ಅವು ಕಾರ್ಯ ನಿರ್ವಹಿಸುತ್ತಿದೆ. ಈಗ ಹೊಸಪೇಟೆ, ಹುಬ್ಬಳ್ಳಿ, ದಾಂಡೇಲಿಯಲ್ಲಿ ಹೊಸ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.
ಸದ್ಯ ನಿರ್ಮಾಣವಾಗಿರುವ ಟ್ರಕ್ ಟರ್ಮಿನಲ್‍ಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿಲ್ಲದ ಕಾರಣ ಚಾಲಕರಿಗೆ ತೊಂದರೆಗಳಾಗುತ್ತಿದೆ. ಹೀಗಾಗಿ ಜಪಾನ್ ಮಾಡೆಲ್ ಟ್ರಕ್ ಟರ್ಮಿನಲ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕಾಗಿ ಜಪಾನ್ ಹೋಗಿ ಅಧ್ಯಯನ ಮಾಡಿಕೊಂಡು ಬರಲಾಗಿದ್ದು ಅದೇ ಮಾದರಿಯಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಜಪಾನ್ ಮಾದರಿಯ ಅತ್ಯಾಧುನಿಕ ಟರ್ಮಿನಲ್‍ನಲ್ಲಿ ಪೆಟ್ರೋಲ್ ಬಂಕ್, ಸಿನಿಮಾ ಹಾಲ್, ಡಾರ್ಮೆಟ್ರಿ, ಗ್ಯಾರೇಜ್, ವಿಶ್ರಾಂತಿ ಗೃಹ, ಜಿಮ್, ಪಾರ್ಕ್, ಹೋಟೆಲ್ ಸೇರಿ ಹಲವು ಉತ್ತಮ ವ್ಯವಸ್ಥೆ ಮಾಡಲಾಗುವುದು. ಇದರಿಂದ ಚಾಲಕರಿಗೆ ಹಲವು ವ್ಯವಸ್ಥೆ ಒಂದೇ ಕಡೆ ಸಿಗಲಿದೆ ಟ್ರಕ್ ಟರ್ಮಿನಲ್ ಬಗ್ಗೆ ಸರ್ಕಾರ ಹೆಚ್ಚು ಆಸಕ್ತಿವಹಿಸಿಲ್ಲ, ಟರ್ಮಿನಲ್‍ಗಳ ನಿರ್ಮಾಣದಿಂದ ಟ್ರಕ್ ನಿಲುಗಡೆ ಉತ್ತಮ ಸ್ಥಳಾವಕಾಶ ಸಿಗಲಿದೆ. ಇದರಿಂದ ರಸ್ತೆ ಅಪಘಾತ ತಪ್ಪಲಿದೆ. ಅನಗತ್ಯ ಟ್ರಾಫಿಕ್ ಜಾಮ್ ಮತ್ತು ವಾಯು ಮಾಲಿನ್ಯ ಕೂಡಾ ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡು ಸರ್ಕಾರದಿಂದ ಹೊಸ ತಂತ್ರ
ಈ ಎಲ್ಲ ಅಂಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು 500 ಕೋಟಿ ಅನುದಾನ ಕೇಳಲಾಗಿತ್ತು, ಆದರೆ ಸರ್ಕಾರ 100 ಕೋಟಿ ಅನುದಾನ ನೀಡಿದೆ. ಒಂದು ಟರ್ಮಿನಲ್ ನಿರ್ಮಾಣಕ್ಕೆ 40 ಕೋಟಿ ವೆಚ್ಚವಾಗಲಿದ್ದು, ಭೂಮಿ ಖರೀದಿಗೆ ಪ್ರತ್ಯೇಕ ಹಣದ ಅವಶ್ಯಕತೆ ಇದೆ. ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯದ್ಯಾಂತ ಹೆಚ್ಚು ಅತ್ಯಾಧುನಿಕ ಟ್ರಕ್ ಟರ್ಮಿನಲ್ ನಿರ್ಮಿಸಲು ಚಿಂತಿಸಲಾಗಿದೆ ಎಂದು ವೀರಯ್ಯ ಹೇಳಿದರು.