ರಾಮನಗರ: ಶಿವಮೊಗ್ಗದಲ್ಲಿ ಕಲ್ಲುಗಣಿಗಾರಿಕೆ ದುರಂತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ, ಅಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಕ್ಕೆ ನಾವು ಸಾಂತ್ವನ ಹೇಳಬಹುದು ಆದರೆ ಅವರ ಜೀವಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಎಚ್‍ಡಿಕೆ, ಇದು ನಿಜಕ್ಕೂ ಬೇಸರದ ವಿಚಾರ. ಇಂತಹ ಘಟನೆಗಳು ನಡೆಯಬಾರದು. ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಆಡಳಿತ ಸರ್ಕಾರಗಳು ಕ್ರಮವಹಿಸಬೇಕು. ಪ್ರಧಾನಮಂತ್ರಿಯಿಂದ ಹಿಡಿದು ನನ್ನ ಮಟ್ಟದ ನಾಯಕರವರೆಗೂ ಘಟನೆಯ ಕುರಿತು ಟ್ವೀಟ್ ಮಾಡ್ತೇವೆ ಅಷ್ಟೇ. ಈಗ ಅದೊಂದು ರೀತಿಯ ವಾತವರಣ ಸೃಷ್ಟಿಯಾಗಿದೆ. ಇದನ್ನು ಹೊರತುಪಡಿಸಿ ಇದರ ಕುರಿತು ಆಡಳಿತ ಸರ್ಕಾರ ಕಠಿಣ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ಇದು ನಿಜಕ್ಕೂ ಬೇಸರದ ವಿಚಾರ. ಇಂತಹ ಘಟನೆಗಳು ನಡೆಯಬಾರದು. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಲಿದೆ. ಮುಖ್ಯಮಂತ್ರಿಗಳು ಸಹ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ದುರಂತಕ್ಕೆ ಕಾರಣರಾದ ಯಾರೇ ಇರಲಿ, ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.