ಬೆಂಗಳೂರು: ಹುಣಸೂರಲ್ಲಿ ನಾನು ಸೋಲನುಭವಿಸಲು ಸಿ.ಪಿ ಯೋಗೇಶ್ವರ್ ಅವರೇ ನೇರ ಕಾರಣ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಯೋಗೇಶ್ವರ್ ಅವರನ್ನ ನೂರಕ್ಕೆ ನೂರು ಸಚಿವರನ್ನಾಗಿ ಮಾಡುವುದಾಗಿ ಹೇಳಿದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಎಸ್‍ವೈ ಹಾಗೂ ಯೋಗೇಶ್ವರ್ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದರು. ಹುಣಸೂರಿನಲ್ಲಿ ನನ್ನ ಸೋಲಿಗೆ ನೇರ ಕಾರಣ ಸಿ.ಪಿ. ಯೋಗೇಶ್ವರ್. ನನಗೆ ಟಿಕೆಟ್ ಕೊಡದೆ ಇದ್ದಕ್ಕೂ ಮುಂಚಿತವಾಗಿ ನಾನೇ ಕ್ಯಾಂಡಿಡೇಟ್ ಅಂತ ಬಿಂಬಿಸಿ ಸೀರೆ ಹಂಚಿ ಡ್ಯಾಮೇಜ್ ಮಾಡಿದ್ದ. ಅದಾದ ಬಳಿಕ ನಾನು ಅಭ್ಯರ್ಥಿ ಆದ್ಮೇಲೆ ಪಕ್ಷದಿಂದ ಚುನಾವಣೆಗೆ ಅಂತ ನನಗೆ ಬಂದಂತಹ ದೊಡ್ಡ ಮೊತ್ತದ ಹಣ ನನಗೆ ತಲುಪಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನಗೆ ಅಂತ ಬಂದ ಹಣವನ್ನ ಯೋಗೇಶ್ವರ್ ಹಾಗೂ ಸಂತೋಷ್ ಲಪಟಾಯಿಸಿದ್ರು. ನನ್ನ ಸೋಲಿಗೆ ಇದು ಕೂಡ ಕಾರಣ. ಇದೇ ವಿಚಾರ ಸಂಬಂಧ ಸಿಎಂ ಹಾಗೂ ಪಕ್ಷದ ಅಧ್ಯಕ್ಷರಿಗೂ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ವಿಚಾರದಿಂದ ನನಗೆ ತುಂಬಾನೇ ಬೇಸರವಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡಿರುವ ಹೇಳಿಕೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿ, ಯೋಗೇಶ್ವರ್ ಸಿಎಂಗೆ ಅಭಿನಂದನೆ ಸಲ್ಲಿಸಿದರು. ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲ ಇದ್ದೇ ಇರುತ್ತೆ. ಪಕ್ಷದೊಳಗಿನ ಗೊಂದಲಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹೇಳಿದ್ದಾರೆ.