– ತಾಯಿ ಮೃತದೇಹ ತಬ್ಬಿಕೊಂಡು ಗೋಳಾಡಿ ನಾಟಕ ಮಾಡಿದ್ದ ಆರೋಪಿ
ಮಂಡ್ಯ: ಜಿಲ್ಲೆಯ ಮನೆಯೊಂದರಲ್ಲಿ ಹಾಡುಹಗಲೇ ಮಹಿಳೆ ಬರ್ಬರ ಹತ್ಯೆಯಾಗಿತ್ತು. ಇದೀಗ ಪೊಲೀಸರು ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗನೇ ತಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮೂರು ದಿನದ ಹಿಂದಷ್ಟೇ ಮಂಡ್ಯದ ವಿದ್ಯಾನಗರದ ಮನೆಯೊಂದರಲ್ಲಿ ಹಾಡಹಗಲೇ ಮಹಿಳೆಯ ಭೀಕರ ಹತ್ಯೆ ನಡೆದಿತ್ತು. ಈ ಘಟನೆಯಿಂದ ಅಕ್ಕಪಕ್ಕದ ನಿವಾಸಿಗಳನ್ನು ಬೆಚ್ಚಿಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪಶ್ಚಿಮ ಠಾಣೆ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ವಂತ ಮಗನೇ ತಾಯಿಯನ್ನು ಕೊಲೆ ಮಾಡಿರೋದು ಬಹಿರಂಗವಾಗಿದೆ.
ಮಾಜಿ ಸಂಸದೆ, ನಟಿ ರಮ್ಯಾ ಈ ಹಿಂದೆ ಬಾಡಿಗೆ ಪಡೆದಿದ್ದ ಮನೆಯ ಪಕ್ಕದ ಔಟ್‍ಹೌಸ್‍ನಲ್ಲಿ 45 ವರ್ಷದ ಶ್ರೀಲಕ್ಷ್ಮೀ ಅಲಿಯಾಸ್ ಲಲಿತಾಂಬ ತಮ್ಮ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಎರಡು ವರ್ಷಗಳಿಂದ ವಾಸವಿದ್ದರು. ಜುಲೈ 29 ರಂದು ಚಾಕುವಿನಿಂದ ಹಲವು ಬಾರಿ ಇರಿದು ಆಕೆಯ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಬಂಧಿಸಿದಂತೆ ಆಕೆಯ ಹಿರಿಯ ಮಗ ಮನುಶರ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನುಶರ್ಮ ಹುಡುಗಿಯೊಬ್ಬಳ ಜೊತೆ ಫೋನಿನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ, ಮಗನ ನಡುವೆ ಜಗಳ ನಡೆಯುತ್ತಿತ್ತು. ಜುಲೈ 29ರಂದು ಕೂಡ ಹುಡುಗಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಗಮನಿಸಿ ತಾಯಿ ಬೈದಿದ್ದಾರೆ. ಮಾತು ಕೇಳದಿದ್ದಾಗ ಲಲಿತಾಂಬ ಮಗನಿಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಮನುಶರ್ಮ, ತರಕಾರಿ ಕತ್ತರಿಸುವ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಬಟ್ಟೆ ಬದಲಿಸಿಕೊಂಡು ರಕ್ತಿಸಿಕ್ತವಾಗಿದ್ದ ತನ್ನ ಬಟ್ಟೆ ಹಾಗೂ ಚಾಕುವನ್ನು ರೈಲ್ವೆ ಹಳಿಗಳ ಮೇಲೆ ಬಿಸಾಡಿದ್ದಾನೆ. ಕೊಲೆಯಾದ ಮಹಿಳೆಯ ಎರಡನೇ ಮಗ ಆದಿತ್ಯ, ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಕೊಲೆ ನಡೆದಿರುವುದು ತಿಳಿದಿದೆ. ಕೆಲವು ಗಂಟೆ ಬಿಟ್ಟು ಮನೆಗೆ ವಾಪಸ್ ಬಂದಿದ್ದ ಆರೋಪಿ, ತನಗೇನೂ ಗೊತ್ತಿಲ್ಲವೆಂಬಂತೆ ತಾಯಿ ಮೃತದೇಹ ತಬ್ಬಿಕೊಂಡು ಗೋಳಾಡಿ, ಪ್ರಕರಣ ದಾರಿ ತಪ್ಪಿಸುವ ಯತ್ನ ನಡೆಸಿದ್ದನು.
ಆತನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿದ್ದ ತಾಯಿ, ಮಗ ದಾರಿತಪ್ಪ ಬಾರದೆಂದು ಬೈದು, ಒಂದೇಟು ಹೊಡೆದಿದ್ದರು. ಆದರೆ ಹೆತ್ತ ತಾಯಿಯನ್ನೇ ಕೊಂದು ಮಗ ಜೈಲು ಸೇರಿದ್ದಾನೆ.