ಬೆಂಗಳೂರು: ಫೆಬ್ರವರಿ 16ರಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 44ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ದರ್ಶನ್ ತಮ್ಮ ಹುಟ್ಟುಹಬ್ಬದಂದು ರಾಬರ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡುತ್ತಿದ್ದಾರೆ.
ಈಗಾಗಲೇ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ಮನೆಯಲ್ಲಿ ಕೂಡ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ತಮ್ಮ ಬರ್ತ್ ಡೇಗೆ ಖರ್ಚು ಮಾಡುವ ಹಣವನ್ನು ನಿಮ್ಮ ಕುಟುಂಬಕ್ಕೆ ಖರ್ಚು ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ನೆಚ್ಚಿನ ನಟನ ಬರ್ತ್ ಡೇಯನ್ನು ಆಚರಿಸಲಾಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಇದೀಗ ದರ್ಶನ್ ಫೆಬ್ರವರಿ 16ರಂದು ರಾಬರ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿರುವ ದಿನಾಂಕವನ್ನು ಘೋಷಿಸಿರುವ ಚಿತ್ರತಂಡ ಸಮಯವನ್ನು ಇನ್ನೂ ನಿಗದಿ ಪಡಿಸಿಲ್ಲ.
ನಿರ್ದೇಶಕ ತರುಣ್ ಸುಧೀರ್ ರಾಬರ್ಟ್ ಸಿನಿಮಾವನ್ನು ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಲ್ಲದೆ ರಾಬರ್ಟ್ ಸಿನಿಮಾದಲ್ಲಿ ಜಗಪತಿ ಬಾಬು, ರವಿ ಕೃಷ್ಣನ್, ಆಶಾ ಭಟ್, ದೇವರಾಜ್, ವಿನೋದ್ ಪ್ರಭಾಕರ್, ಪಿ ರವಿ ಶಂಕರ್, ಚಿಕ್ಕಣ್ಣ, ಶಿವನರಾಜ್ ಕೆ.ಆರ್ ಪೇಟೆ, ಸೋನಾಲ್ ಮಾಂಟೆರೋ ಸೇರಿದಂತೆ ಹಲವರು ಕಲಾವಿದರು ಅಭಿನಯಿಸಿದ್ದಾರೆ. 2020ರ ಏಪ್ರಿಲ್ ನಲ್ಲಿ ರಿಲೀಸ್ ಆಗಬೇಕಿದ್ದ ರಾಬರ್ಟ್ ಸಿನಿಮಾ ಕೊರೊನಾದಿಂದ 2021ರ ಮಾರ್ಚ್ 11ರಂದು ಬೆಳ್ಳಿಪರದೆ ಮೇಲೆ ಬರಲಿದೆ.
ರಾಬರ್ಟ್ ಸಿನಿಮಾದ ನಂತರ ದರ್ಶನ್ 17ನೇ ಶತಮಾನದ ಯೋಧ ಚಿತ್ರದುರ್ಗದ ಕೊನೆಯ ಆಡಳಿತಗಾರ ಗಂಡುಗಲಿ ಮದಕರಿ ನಾಯಕ ಪಾತ್ರದಲ್ಲಿ ಮಿಂಚಲಿದ್ದಾರೆ.