– ಸಾವಿನ ಹಿಂದೆ ಮೂಡಿದೆ ಅನುಮಾನ
ಬೆಂಗಳೂರು: ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಯಲಹಂಕದ ಸಹಕಾರ ನಗರದಲ್ಲಿ ನಡೆದಿದೆ.
ನಾಳೆ 16 ವರ್ಷದ ಬಾಲಕಿಯ ಹುಟ್ಟುಹಬ್ಬ, ಕಳೆದ ಒಂದು ವಾರದಿಂದಲೇ ಹೊಸ ಬಟ್ಟೆ ಕೊಡಿಸುವಂತೆ ಬಾಲಕಿ ಪೋಷಕರಿಗೆ ಒತ್ತಾಯ ಮಾಡಿದ್ದಳು. ಆದರೆ ಪೋಷಕರು ಆಕೆಯ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಸಹ ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಳು. ಆದರೆ ಪೋಷಕರು ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಎಂದಿನಂತೆ ಕೆಲಸಕ್ಕೆಂದು ಹೊರಗಡೆ ಹೋಗಿದ್ದರು.
ಬಟ್ಟೆ ಕೊಡಿಸದ್ದಕ್ಕೆ ಬೇಸರಗೊಂಡ ಬಾಲಕಿ, ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಚಾರ ತಿಳಿದು ವಾಪಸ್ ಬಂದ ಪೋಷಕರು, ಮಗಳ ಈ ನಿರ್ಧಾರದಿಂದ ಶಾಕ್ ಆಗಿದ್ದಾರೆ. ಕೇವಲ ಬಟ್ಟೆ ವಿಚಾರಕ್ಕೆ ಈ ರೀತಿ ಮಾಡಿಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲವೆಂದು ನೆನದು ಕಣ್ಣೀರು ಹಾಕಿದ್ದಾರೆ.
ಇದೇ ವೇಳೆ ಮತ್ತೊಂದು ವಿಚಾರ ಕೂಡ ಬೆಳಕಿಗೆ ಬಂದಿದ್ದು, ಕೆಲ ತಿಂಗಳಿಂದ ಬಾಲಕಿ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಹುಡುಗ ಸಹ ಇಷ್ಟಪಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿದಿದ್ದು, ಬಳಿಕ ಅದೇ ಹುಡುಗನ ಜೊತೆ ಮದುವೆ ಮಾಡುವಂತೆ ಪೋಷಕರನ್ನು ಕೇಳಿದ್ದಳಂತೆ. ಆದರೆ ಪೋಷಕರು ಆ ಹುಡುಗ ನಿನಗೆ ಅಣ್ಣನ ವರಸೆ ಆಗಬೇಕು. ಹೀಗಾಗಿ ಮದುವೆ ಸಾಧ್ಯವಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಕೊಡುಗೆಹಳ್ಳಿ ಪೊಲೀಸರು, ಪರಿಶೀಲನೆ ನಡೆಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.