ಲಕ್ನೋ: ಜನಿಸಿದ 8 ದಿನಕ್ಕೆ ಸೋಂಕಿಗೆ ಒಳಗಾಗಿದ್ದ ನವಜಾತ ಶಿಶು 15 ದಿನಗಳ ಬಳಿಕ ಸೋಂಕು ವಿರುದ್ಧ ಗೆದ್ದು ಬಂದಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಮಗುವಿಗೆ ಜನ್ಮ ನೀಡುವ ಮುನ್ನ ಮಗುವಿನ ತಾಯಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆದರೆ ಮನೆಗೆ ಹಿಂದಿರುಗುವ ವೇಳೆಗೆ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅಲ್ಲದೇ 8 ದಿನಗಳ ಮಗುವಿನ ವರದಿ ಕೂಡ ಪಾಸಿಟಿವ್ ಬಂದಿತ್ತು. ಆದರೆ ಸದ್ಯ ಮಗುವಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸತತ 15 ದಿನಗಳು ವೈದ್ಯರು ನಿಗಾದಲ್ಲಿದ್ದ ಮಗು ಡಿಸ್ಚಾರ್ಜ್ ಆಗಿದೆ ಎಂದು ಯಶೋಧ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಒಂದೇ ದಿನ 3,92,488 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 1,95,57,457ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 3,689 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೆ ದೇಶದಲ್ಲಿ 2,15,542 ಮಂದಿ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. 3,07,865 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 33,49,644 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಒಟ್ಟು 15,68,16,031 ಮಂದಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.