ಬೆಂಗಳೂರು: ನನಗೆ ಈಗ 68 ವರ್ಷ ವಯಸ್ಸು. ಸಿಂಪತಿಯಿಂದ ಹಣ ಮಾಡುವ ವಯಸ್ಸಾ?ನನ್ನ ಮರ್ಯಾದೆ ಬೀದಿ ಪಾಲಾಗಿದೆ, ನನ್ನ ಹೆಸರಿಗೆ ಮಸಿ ಬಳಿದಿದ್ದಾರೆ. ಅವಳು ಬೇಡ ನನಗೆ, ಸತ್ತಿದ್ದಾಳೆ ಎಂದುಕೊಂಡಿದ್ದೇನೆ, ಅವಳಿಂದ ಏನೂ ಬೇಕಾಗಿಲ್ಲ. ದೇವರು ನಮಗೆ ಸಾವು ಕೊಟ್ಟರೆ ಸಾಕು. ನನ್ನ ಮಗಳೇ ಶತ್ರು ರೀತಿ ಆಡುತ್ತಾಳೆ ಅಂದ್ರೆ ಹುಟ್ಟಿದಾಗಲೇ ಸತ್ತಿದ್ದರೆ ಚೆನ್ನಾಗಿತ್ತು ಅನ್ನಿಸುತ್ತಿದೆ ಎಂದು ನಟ ಸತ್ಯಜಿತ್ ಗಳಗಳನೆ ಅತ್ತಿದ್ದಾರೆ.
ಮಗಳು ತಮ್ಮ ವಿರುದ್ಧ ಹೇಳಿಕೆ ನೀಡಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಸಕ್ಕರೆ ಖಾಯಿಲೆಗೆ ಇನ್ಸೂಲಿನ್, ಇಂಜೆಕ್ಷನ್ ತೆಗೆದುಕೊಳ್ಳಲು ಹಣ ನೀಡಿಲ್ಲ. ಸಂಘ ಸಂಸ್ಥೆಗಳು ಸನ್ಮಾನ ಮಾಡಿದ ಹಣ, ದಾನಿಗಳು ನೀಡಿದ ಹಣದಿಂದ ಬದುಕಿದ್ದೇನೆ. ಆದರೂ ನಮ್ಮ ವಿರುದ್ಧ ದೂರು ನೀಡಿದ್ದಾಳೆ ಎಂದು ಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡನೆ – ತಂದೆ ಸತ್ಯಜೀತ್ ವಿರುದ್ಧ ಮಗಳಿಂದ ದೂರು
ಮಗಳು ಸಾಧನೆ ಮಾಡಲೆಂದು ಹಗಲು, ರಾತ್ರಿ ದುಡಿದು ಓದಿಸಿದ್ದೇನೆ. ಮನೆ ಮಾರಿ, ಬಡ್ಡಿ ಸಾಲ ಮಾಡಿ ಹಣ ತಂದು ವಿದೇಶದಲ್ಲಿ ಓದಿಸಿದ್ದೇನೆ. ಈಗ ಓದಿ ವಿವಾಹವಾದ ಬಳಿಕ ಇದೀಗ ನಮಗೆ ಸಹಾಯ ಮಾಡಲು ಕೇಳಿದ್ದೇವೆ. ಅಲ್ಲದೆ ನಾವು ಅಗ್ರೀಮೆಂಟ್ ಮಾಡಿಸಿ ಪ್ರತಿ ತಿಂಗಳು ಇಷ್ಟೇ ಹಣ ನೀಡು ಎಂದು ನಾನು ಕೇಳಿಲ್ಲ. ಇದು ಅಪಪ್ರಚಾರ, ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ನನ್ನ ಮಗಳ ಮೂಲಕ ಷಡ್ಯಂತ್ರ ನಡೆಸಿದ್ದಾರೆ.
ನಾನು ಮಗಳ ಕಡೆಯಿಂದ ಯಾವುದೇ ಹಣ ಕೇಳಿಲ್ಲ. ಮಗಳು ಓದುವಾಗ ಮನೆ ಮಾರಿ ಹಣ ಕೊಟ್ಟಿದೆ. ಹೀಗಾಗಿ ಮನೆ ಮಾಡಿಕೊಡುವಂತೆ ಕೇಳಿದ್ದೇನೆ. ಯಾವುದೇ ಬೆದರಿಕೆ ಕರೆಗಳನ್ನ ಮಾಡೋದಕ್ಕೆ ಉತ್ತೇಜನ ಮಾಡಿಲ್ಲ, ಮಾಡೋದು ಇಲ್ಲ. ಸಾಯುವ ವಯಸ್ಸಿನಲ್ಲಿ ಮಗಳ ಏಳಿಗೆ ಬಯಸುತ್ತೇನೆ ಹೊರತು ಕೆಟ್ಟದ್ದನ್ನ ಬಯಸಲ್ಲ. ಮಗಳು ತಗೆದುಕೊಂಡಿರುವ ನಿರ್ಧಾರ ಮುಂದೆ ಅವಳಿಗೇ ಮುಳುವಾಗಬಹುದು. ಸರಿ ದಾರಿಯಲ್ಲಿ ನಡೆಯುದಕ್ಕೆ ತಿಳಿಸುತ್ತೇನೆ, ಕೆಟ್ಟದ್ದನ್ನ ಬಯಸುವುದಿಲ್ಲ. ಮಗಳೇ ನನ್ನ ವಿರುದ್ಧ ನಿಲ್ಲುತ್ತಾಳೆಂಬ ನಿರೀಕ್ಷೆ ಯಾವುತ್ತೂ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದೇನೆ. ಕಾಲು ಇಲ್ಲದಿದ್ದರೂ ಪರವಾಗಿಲ್ಲ. ನಾನು ನಿಮ್ಮ ಸಹಾಯ ಕೇಳಲ್ಲ. ನನಗೆ ಸಂಘ ಸಂಸ್ಥೆಯವರು ಸನ್ಮಾನಿಸಿ, ಸ್ವಲ್ಪ ಮಟ್ಟಿಗೆ ಸಹಾಯ ಧನ ಕೊಡುತ್ತಾರೆ. ನನ್ನ ಇಬ್ಬರು ಮಕ್ಕಳು ದುಡಿಯುತ್ತಾರೆ ಅಷ್ಟೇ ಸಾಕು. ಆದರೆ ಮುಂದೆ ಮಗಳಿಗೆ ಸಮಸ್ಯೆಯಾಗಬಾರದು. ನಿನ್ನ ಮೇಲೆ ತಪ್ಪು ಹೊರಿಸುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರು ಎಂದು ಕಣ್ಣೀರು ಹಾಕಿದ್ದಾರೆ.