ಬೆಂಗಳೂರು : ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪುಟ್ಟ ಬಾಲಕನೊಬ್ಬ ನೆರವು ನೀಡಿದ್ದಾನೆ. ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.
ಬೆಂಗಳೂರಿನ 12 ವರ್ಷದ ಮಾಯಾಂಕ್ ಜೈನ್ ಶನಿವಾರ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಗೆ ಉಳಿತಾಯ ಮಾಡಿದ 4,190 ರೂಪಾಯಿಗಳನ್ನು ನೀಡಿದ್ದಾನೆ. ಅಭಿನಂದನ್ ಹಾಗೂ ಸ್ವಪ್ನರವರ ಸುಪುತ್ರ ಮಾಯಾಂಕ್ 4 ವರ್ಷಗಳಿಂದ ಹುಂಡಿಯಲ್ಲಿ 4,190 ರೂ. ಹಣವನ್ನು ಕೂಡಿಟ್ಟಿದ್ದ.
ಕೊರೊನಾದಿಂದಾದ ಸಾವು-ನೋವುಗಳನ್ನು ಮನಗಂಡು ಕೊರೋನಾ ಸೋಂಕಿತರ ಕಷ್ಟವನ್ನು ಅರ್ಥಮಾಡಿಕೊಂಡು ಉಳಿತಾಯದ ಹಣವನ್ನು ಸ್ವ ಇಚ್ಛೆಯಿಂದ ಸಿಎಂ ಪರಿಹಾರ ನಿಧಿಗೆ ನೀಡಿದ್ದಾನೆ. ಚಿಕ್ಕಬಾಣಾವರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರೋ ಮಾಯಾಂಕ್, ಎಲ್ಲರೂ ಕೋವಿಡ್ ಪರಿಹಾರ ನಿಧಿ ಸಹಾಯ ಮಾಡಬೇಕು. ಇತರರ ಕಷ್ಟಕ್ಕೆ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾನೆ.