ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

Public TV
2 Min Read
Uttarakhand 1

ಡೆಹರಾಡೂನ್: ಭಾನುವಾರ ಬೆಳಗ್ಗೆ ಸಂಭವಿಸಿದ ಹಿಮ ಪ್ರಳಯದಿಂದ ಉತ್ತರಾಖಂಡ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ. ಸುರಂಗದಲ್ಲಿ ಸಿಲುಕಿದ್ದ 12 ಜನರ ಜೀವವನ್ನ ಒಂದು ಫೋನ್ ಕರೆ ಉಳಿಸಿದೆ.

ಸುರಂಗದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ತಾವು ಹೊರ ಬಂದ ಅಚ್ಚರಿಯ ವಿಷಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ದಿಢೀರ್ ಅಂತ ಸುರಂಗದೊಳಗೆ ನೀರು ಮತ್ತು ಕೆಸರು ಸೇರಿಕೊಳ್ಳಲಾರಂಭಿಸಿತು. ಹೊರ ಬರುವ ಎಲ್ಲ ಮಾರ್ಗಗಳು ಬಂದ್ ಆಗಿದ್ದರಿಂದ ಸುರಂಗದಲ್ಲಿದ್ದ 12 ಜನರು ಜೀವದ ಆಸೆಯನ್ನ ಚೆಲ್ಲಿ ಭಯದ ಸ್ಥಿತಿಯಲ್ಲಿದ್ದೀವಿ. ಈ ವೇಳೆ ನಮ್ಮ ಜೊತೆಯಲ್ಲಿದ್ದ ಓರ್ವ ವ್ಯಕ್ತಿಯ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಕ್ತು. ಕೂಡಲೇ ನಮ್ಮ ಅಧಿಕಾರಿಗಳಿಗೆ ಫೋನ್ ಮಾಡಿ ತಾವು ಸಿಲುಕಿರುವ ವಿಷಯ ಮತ್ತು ಸ್ಥಳವನ್ನ ತಿಳಿಸಿದ್ದೀವಿ. ಕೆಲ ಗಂಟೆಗಳ ಬಳಿಕ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರು ನಮ್ಮೆಲ್ಲರನ್ನ ರಕ್ಷಿಸಿದರು ಎಂದು ಹೇಳಿದ್ದಾರೆ.

Uttarakhand 2

ನಾನು ಚಮೋಲಿಯ ಧಾಕಾ ಗ್ರಾಮದ ನಿವಾಸಿ. ತಪೋವನ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಸುರಂಗದೊಳಗೆ ನೀರು ಬಂದಾಗ ಜೀವದ ಮೇಲಿನ ಆಸೆಯನ್ನೇ ಬಿಟ್ಟಿದ್ದೆ. ಕೊನೆಗೆ ಸುರಂಗದಿಂದ ಸಣ್ಣದಾದ ಬೆಳಕಿನ ಕಿರಣ ಕಾಣಿಸಿದ್ದರಿಂದ ಉಸಿರಾಡಲ ಸಮಸ್ಯೆಯಾಗಲಿಲ್ಲ. ನಮ್ಮ ಸಹದ್ಯೋಗಿ ಫೋನ್ ಮಾಡಿದ್ದರಿಂದ ನಾವು ಬದುಕುಳಿದಿದ್ದೇವೆ ಎಂದು ಮತ್ತೋರ್ವ ನೌಕರ ತಿಳಿಸಿದ್ದಾರೆ.

Uttarakhand 3

ಹಿಮ ಸುನಾಮಿಯಲ್ಲಿ ಕೊಚ್ಚಿಹೋದ 170 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು ನಾಲ್ವರ ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆ 18ಕ್ಕೆ ಹೆಚ್ಚಿದೆ. ರಕ್ಷಣಾ ಪಡೆಗಳು ಹರಸಾಹಸ ನಡೆಸಿ ತಪೊವನ ಸುರಂಗದಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿದ್ದಾರೆ. ಸುರಂಗದಲ್ಲಿ ತುಂಬಿಹೋಗಿರುವ ಕೆಸರಿನ ರಾಶಿಯನ್ನು ಹೊರಹಾಕಲು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.

250 ಮೀಟರ್ ಉದ್ದದ ಸುರಂಗದೊಳಗೆ 150 ಮೀಟರ್‍ವರೆಗೂ ಎಸ್‍ಡಿಆರ್‍ಎಫ್ ಪಡೆಗಳು ಅತೀಕಷ್ಟದಿಂದ ಹೋಗಿ ಕೆಸರಿನಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿವೆ. ಮತ್ತೊಂದೆಡೆ ಧೌಲಿ ಗಂಗಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ದಿಢೀರ್ ಹಿಮ ಪ್ರಳಯದ ಕಾರಣ ತಪೋವನ್-ವಿಷ್ಣುಘಡ ಜಲವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ 170 ಕಾರ್ಮಿಕರು ಕೊಚ್ಚಿಹೋಗಿದ್ರು. ಈ ಮಧ್ಯೆ, ಜಲವಿಲಯದಿಂದ ಪ್ರಾಣನಷ್ಟದ ಜೊತೆಗೆ ಭಾರೀ ಆಸ್ತಿ ಹಾನಿ ಸಂಭವಿಸಿದೆ.

Share This Article
Leave a Comment

Leave a Reply

Your email address will not be published. Required fields are marked *