ಹಾಸನ: ಮೂರು ದಿನಗಳಿಂದ ಹಾಸ್ಟೆಲ್‍ನಲ್ಲಿ ನೀರು ಇಲ್ಲದ್ದಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಬಟ್ಟೆ ತೊಳೆಯಲು ತನ್ನ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದಾನೆ. ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.
ಡಿಪ್ಲೋಮಾ ಕಾಲೇಜಿನ ಪ್ರಥಮ ವರ್ಷದ ಮೆಕಾನಿಕಲ್ ವಿದ್ಯಾರ್ಥಿ ಪ್ರತೀಶ್(17) ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಮಂಡ್ಯ ಮೂಲದವನಾಗಿದ್ದು, ಕಾಲೇಜಿನ ಹಾಸ್ಟೆಲ್‍ನಲ್ಲಿ ವಾಸವಿದ್ದ. ನಾಲ್ಕು ಜನ ಸಹಪಾಠಿಗಳ ಜೊತೆ ಬೆಳಗ್ಗೆ 11 ಗಂಟೆಗೆ ನದಿಗೆ ತೆರಳಿದ್ದು, 12.15ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಮೂರು ದಿನಗಳಿಂದ ಕಾಲೇಜಿನ ಹಾಸ್ಟೆಲ್‍ನಲ್ಲಿ ನೀರಿಲ್ಲದ ಕಾರಣ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದಾಗ ದುರ್ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೃತನ ಪೋಷಕರು ಆಗಮಿಸುವ ತನಕ ಮೃತದೇಹ ನೀಡುವುದಿಲ್ಲವೆಂದು ತಟ್ಟೆಕೆರೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಗ್ರಾಮಾಂತರ ಠಾಣೆ ಸಬ್ ಇನ್‍ಸ್ಪೆಕ್ಟರ್ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಹಾಸ್ಟೆಲ್ ವಾರ್ಡನ್ ಜ್ಞಾನೇಶ್ವರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.