ಹಾಸನ: ಹೊರ ಜಿಲ್ಲೆಯಿಂದ ಕೂಲಿ ಅರಸಿ ಬಂದ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳಿಬ್ಬರು ಜೂ.21ರಂದು ನಾಪತ್ತೆಯಾಗಿದ್ದರು. ಆದರೆ ಇದೀಗ ಹಾಸನ ಪೊಲೀಸರ ಕಾರ್ಯಚರಣೆಯ ಫಲವಾಗಿ ಮಕ್ಕಳು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾರೆ.
Advertisement
ಎರಡು ಬಡ ಕುಟುಂಬಗಳು ಹಾಸನ ನಗರದ ಜವೇನಹಳ್ಳಿ ಮಠದ ಸಮೀಪ ಗುಡಿಸಲಿನಲ್ಲಿ ವಾಸವಾಗಿತ್ತು. ಆ ಕುಟುಂಬದ ಲೋಕೇಶ್ ಎಂಬವರಿಗೆ ಹನ್ನೊಂದು ವರ್ಷದ (ಕಾಂಚನ) ಹೆಣ್ಣು ಮಗಳಿದ್ದು, ಇನ್ನೊಬ್ಬರು ಪತಿ ಕಳೆದುಕೊಂಡಿರುವ ನಾಗರತ್ನಗೆ ಎಂಟು ವರ್ಷದ (ಹಂಸವೇಣಿ) ಮಗಳಿದ್ದಾಳೆ. ಇದನ್ನೂ ಓದಿ: ಮೀನು ಹಿಡಿಯಲು ಮುಗಿಬಿದ್ದ ನೂರಾರು ಜನ- ಕೊರೊನಾ ರೂಲ್ಸ್ ಬ್ರೇಕ್
Advertisement
ಪ್ರತಿದಿನವೂ ಎರಡು ಕುಟುಂಬಗಳು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಅಕ್ಕಪಕ್ಕದ ಮನೆಯ ಎರಡು ಮಕ್ಕಳು ಪ್ರತಿನಿತ್ಯವೂ ಜೊತೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ ಜೂ.21 ರಂದು ಪೋಷಕರು ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಇಬ್ಬರು ಮಕ್ಕಳು ಕಾಣೆಯಾಗಿದ್ದು ಕಣ್ಣೀರಿಡುತ್ತಾ ಪೋಷಕರು ಎಸ್‍ಪಿ ಆಫೀಸ್ ಮೆಟ್ಟಿಲೇರಿದ್ದರು. ಚಿಕ್ಕಮಕ್ಕಳು ಕಾಣೆಯಾಗಿದ್ದಾರೆ ದಯವಿಟ್ಟು ಹುಡುಕಿಕೊಡಿ ಎಂದು ಗೋಗರೆದಿದ್ದರು. ಹಾಸನ ಎಸ್.ಪಿ ಶ್ರೀನಿವಾಸ್ ಗೌಡ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಾಸನದ ಹುಡುಕಾಟ ನಡೆಸಿದ್ದರೂ ಮಕ್ಕಳು ಪತ್ತೆಯಾಗದ ಕಾರಣ ಆತಂಕಕ್ಕೆ ಕಾರಣವಾಗಿತ್ತು.
Advertisement
Advertisement
ಮಕ್ಕಳು ಜಿಲ್ಲೆಯೊಳಗೆ ಪತ್ತೆಯಾಗದಿದ್ದಾಗ ಹೊರ ಜಿಲ್ಲೆಗಳ ರೈಲ್ವೆ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ಬಸ್ ನಿಲ್ದಾಣಗಳಿಗೆ ಮಕ್ಕಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಬೆಂಗಳೂರಿನ ಯಶವಂತಪುರ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣವನ್ನು ಮುಂಜಾನೆ 4.30 ರ ಸಮಯದಲ್ಲಿ ಪರಿಶೀಲಿಸಿದ ವೇಳೆ ಇಬ್ಬರು ಹೆಣ್ಣುಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ ಮಕ್ಕಳು ಕಾಣೆಯಾದ ರಹಸ್ಯವೂ ಬಯಲಾಗಿದೆ. ಎರಡು ಮಕ್ಕಳು ಆಟವಾಡುತ್ತಲೆ ಮನೆಯ ಬಳಿಯಿಂದ ಹಾಸನದ ರೈಲ್ವೆ ನಿಲ್ದಾಣಕ್ಕೆ ಹೋಗಿ, ಬೆಂಗಳೂರಿಗೆ ಹೊರಟಿದ್ದ ರೈಲು ಏರಿದ್ದಾರೆ. ಇವರನ್ನು ನೋಡಿದ ಸಹಪ್ರಯಾಣಿಕರು ಕೂಡ ಇವರ ಪೋಷಕರು ಕೂಡ ರೈಲಿನಲ್ಲೇ ಇರಬೇಕು ಎಂದು ಸುಮ್ಮನಾಗಿದ್ದಾರೆ. ಆದರೆ ಇದೀಗ ಹಾಸನ ಪೊಲೀಸರ ಕಾರ್ಯವೈಖರಿಯಿಂದ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ.
ಕಾಣೆಯಾದ ಎರಡು ಹೆಣ್ಣುಮಕ್ಕಳನ್ನು ಪೋಷಕರ ಮಡಿಲಿಗೆ ಒಪ್ಪಿಸಿದ ಎಸ್.ಪಿ ಆರ್.ಶ್ರೀನಿವಾಸ್ ಗೌಡ ಹಾಗೂ ಹಾಸನ ಪೊಲೀಸರಿಗೆ ಬಡ ಕುಟುಂಬಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಎಸ್.ಪಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.