– ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಕೊರೊನಾ
ಹಾಸನ: ಹಾಸನದಲ್ಲಿಂದ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಹೊರರಾಜ್ಯ, ಹೊರ ಜಿಲ್ಲೆಯಿಂದ ಬಂದವರಿಗೆ ಅಥವಾ ಅವರ ಜೊತೆ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆದರೆ ಇಂದು ಆ ರೀತಿಯ ಯಾವುದೇ ಸಂಪರ್ಕ ಹೊಂದಿರದ 60 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಆತನನ್ನು ಪರೀಕ್ಷೆ ಮಾಡಿದ ವೈದ್ಯರು ಸೇರಿದಂತೆ 17 ಜನರ ಗಂಟಲು ದ್ರವವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆಗೆ ಕಳುಹಿಸಲಾಗಿದೆ. ವೃದ್ಧನನ್ನು ಪರೀಕ್ಷೆ ಮಾಡಿದ ಆಸ್ಪತ್ರೆ ಕೊಠಡಿ ಸೀಲ್‍ಡೌನ್ ಮಾಡಲಾಗಿದೆ. ವೃದ್ಧ ವಾಸವಿದ್ದ ಗ್ರಾಮವನ್ನು ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವೃದ್ಧನಿಗೆ ಕೊರೊನಾ ಹೇಗೆ ಬಂತು? ಆತ ಯಾರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ? ಆತ ಎಲ್ಲೆಲ್ಲಿ ಓಡಾಡಿದ್ದ ಎಂಬುದರ ಮಾಹಿತಿ ಕಲೆಹಾಕಲಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಹಾಸನ ಜಿಲ್ಲೆಯಲ್ಲಿಂದು ಹೊಸದಾಗಿ 18 ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. 192 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ 78 ಮಂದಿ ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರನ್ನು 7 ದಿನಗಳ ನಂತರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಪಾಸಿಟಿವ್ ವರದಿ ಬಂದರೆ ಅವರನ್ನು ಆಸ್ಪತೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಇಂದು ಹೊಸದಾಗಿ ಬಂದ 18 ಪ್ರಕರಣಗಳಲ್ಲಿ 4 ಮಂದಿ ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇನ್ನುಳಿದ 14 ಮಂದಿ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದು, ಅವರಲ್ಲಿ ಒಬ್ಬರು ಮಾತ್ರ ಸ್ಥಳೀಯರೇ ಆಗಿದ್ದು, ಶ್ವಾಸಕೋಶದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಇನ್ನುಳಿದ ಎಲ್ಲರೂ ಮುಂಬೈನಿಂದ ಬಂದ ಹಿನ್ನೆಲೆಯನ್ನು ಹೊಂದಿರುವವರಾಗಿದ್ದಾರೆ ಎಂದು ಆರ್. ಗಿರೀಶ್ ಮಾಹಿತಿ ನೀಡಿದರು.




