ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬರುತ್ತಿರುವುದರಿಂದ 14 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ.
ವರ್ತಕ ಸಂಘ, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಸಂಘ-ಸಂಸ್ಥೆಗಳ ಮುಖಂಡರು ಸಭೆ ಸೇರಿ ಸ್ವಯಂಪ್ರೇರಿತರಾಗಿ ತಾಲೂಕಿನಾದ್ಯಂತ 14 ದಿನಗಳವರೆಗೆ ಲಾಕ್‍ಡೌನ್ ಮಾಡಲು ನಿರ್ಧರಿಸಿದ್ದಾರೆ. ಚನ್ನರಾಯಪಟ್ಟಣ ತಹಶೀಲ್ದಾರ್ ಮಾರುತಿ ಮತ್ತು ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ಸೇರಿದ್ದು, ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6:30 ರಿಂದ 11:30ರ ವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
Advertisement
Advertisement
ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ನಿರ್ಬಂಧಿಸುವಂತೆ ತಾಲೂಕು ಆಡಳಿತ, ಜನಪ್ರತಿನಿಧಿಗಳು ಸೂಚಿಸಿದ್ದಾರೆ. ಸ್ವಯಂಘೋಷಿತ ಲಾಕ್‍ಡೌನ್‍ಗೆ ತಾಲೂಕಿನ ಎಲ್ಲ ಜನತೆ ಸಹಕರಿಸುವಂತೆ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಾಲೂಕು ದಂಡಾಧಿಕಾರಿ ಜೆ.ಬಿ.ಮಾರುತಿ ಮನವಿ ಮಾಡಿದ್ದಾರೆ.