ಹಾಸನದಲ್ಲಿ ಸೆಂಚುರಿ ದಾಟಿದ ಸೋಂಕಿತರ ಸಂಖ್ಯೆ

Public TV
1 Min Read
HSN DC 1

– ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕೇಸ್

ಹಾಸನ: ಜಿಲ್ಲೆಯಲ್ಲಿ ಇಂದು 13 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಪರಿಣಾಮ ಸೋಂಕಿತರ ಸಂಖ್ಯೆ 112ಕ್ಕೇರಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸೆಂಚುರಿ ಗಡಿ ದಾಟಿದೆ.

ಕೊರೊನಾ ಸೋಂಕಿತರಲ್ಲಿ ಕೆಲವರು ಕೊಡುವ ಮಾಹಿತಿ ಬಗ್ಗೆ ಡಿಸಿ ಆರ್.ಗಿರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಸೋಂಕಿತರಲ್ಲಿ ಕೆಲವರು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅವರನ್ನು ಹಲವು ಬಾರಿ ವಿಚಾರಿಸಿದ ನಂತರ ಒಂದೊಂದಾಗಿ ಮಾಹಿತಿ ನೀಡುತ್ತಾರೆ. ತಾವು ಮಾಹಿತಿ ನೀಡಿದರೆ ಎಲ್ಲಿ ಎಲ್ಲರನ್ನು ಕ್ವಾರಂಟೈನ್ ಮಾಡುತ್ತಾರೆ ಎಂಬ ಯೋಚನೆ ಅವರದ್ದು. ಆದರೆ ನಾವು ಕೋವಿಡ್ ಸೆಂಟರ್‍ನಲ್ಲಿ ಎಲ್ಲರಿಗೂ ಉತ್ತಮ ಆಹಾರ ನೀಡುತ್ತಿದ್ದು, ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿ ಏನನ್ನೂ ಮುಚ್ಚಿಡದೆ ಸರಿಯಾದ ಮಾಹಿತಿ ನೀಡಬೇಕೆಂದು ಡಿಸಿ ಮನವಿ ಮಾಡಿದರು.

hsn dc

ಇಂದು ಹಾಸನದಲ್ಲಿ ಪತ್ತೆಯಾದ 13 ಹೊಸ ಕೋವಿಡ್ ಪ್ರಕರಣಗಳೂ ಕೂಡ ಮುಂಬೈ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಎಲ್ಲರೂ ಚನ್ನರಾಯಪಟ್ಟಣ ತಾಲ್ಲೂಕಿನವರಾಗಿದ್ದಾರೆಂದು ಡಿಸಿ ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದ್ರೆ ಕೇಸ್: ಸಾಮಾಜಿಕ ಜಾಲತಾಣದಲ್ಲಿ ಕೊರೋನ ಸಂಬಂಧ ಸುಳ್ಳು ಸುದ್ದಿ ಹಬ್ಬಿಸಿದ್ರೆ ಪ್ರಕರಣ ದಾಖಲಿಸುವುದಾಗಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಈ ಸಂಬಂಧ ಒಂದು ದೂರು ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

hsn sp

ಇದೇ ವೇಳೆ ಪೊಲೀಸ್ ಪೇದೆ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದ ಎಸ್‍ಪಿ, ರೋಗಿ ಸಂಖ್ಯೆ 1,993 ಆಗಿರುವ ಪೊಲೀಸ್ ಪೇದೆ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ಜನರಿಗೆ ಈಗಾಗಲೇ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಅವರಲ್ಲಿ 17 ಜನರ ವರದಿ ನೆಗೆಟಿವ್ ಬಂದಿದೆ. ಉಳಿದವರ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಪೊಲೀಸ್ ಕಾನ್ಸ್‍ಟೇಬಲ್ ಕೆಲಸ ಮಾಡಿದ ಜಾಗ, ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಗುರುತಿಸಿ ಕ್ವಾರಂಟೈನ್ ಮಾಡಲಾಗಿದ್ದು ಎಚ್ಚರಿಕೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *