ಹಾಸನದಲ್ಲಿ ಮತ್ತೊಂದು ಕೊಲೆ- ಸ್ನೇಹಿತನ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ

Public TV
1 Min Read
hsn murder

– ಮನೆಯ ಹೊರಗೆ ಮಲಗಿದ್ದ ಸ್ನೇಹಿತನಿಗೆ ಬೆಂಕಿ

ಹಾಸನ: ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆ, ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿ ದಿನ ಒಂದಿಲ್ಲೊಂದು ಪ್ರಕರಣ ಬೆಳಕಿಗೆ ಬರುತ್ತಿವೆ. ಇದೀಗ ವ್ಯಕ್ತಿ ಸ್ನೇಹಿತನ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

WhatsApp Image 2020 09 06 at 7.56.35 AM e1599360357573

ಹಾಸನ ಜಿಲ್ಲೆ, ಹೊಳೆನರಸೀಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ನೇಹಿತನ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ರೌಡಿಶೀಟರ್ ಮೆಹಬೂಬ್ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ರಮೇಶ್ ಲಾಕ್‍ಡೌನ್ ನಂತರ ಹೊಳೆನರಸೀಪುರಕ್ಕೆ ವಾಪಸ್ಸಾಗಿದ್ದ. ಬಾರ್‍ನಲ್ಲಿ ಕುಡಿಯುವ ವೇಳೆ ರೌಡಿಶೀಟರ್ ಮೆಹಬೂಬ್ ಮತ್ತು ರಮೇಶ್ ನಡುವೆ ಗಲಾಟೆಯಾಗಿತ್ತು. ಇದರಿಂದ ಆಕ್ರೋಶಗೊಂಡ ರೌಡಿಶೀಟರ್ ಮೆಹಬೂಬ್ ರಮೇಶ್‍ನನ್ನು ಕೊಲೆ ಮಾಡಲು ನಿರ್ಧರಿಸಿದ್ದ.

ರಾತ್ರಿವೇಳೆ ರಮೇಶ್ ಯಾವಾಗಲೂ ಮನೆ ಹೊರಗೆ ಮಲಗಿರುವುದನ್ನು ಅರಿತಿದ್ದ ರೌಡಿ ಶೀಟರ್ ಮೆಹಬೂಬ್ ಆಗಸ್ಟ್ 9ರಂದು ರಾತ್ರಿ ರಮೇಶ್ ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ರಮೇಶ್ ಕುಡಿದಿದ್ದರ ಜೊತೆಗೆ ಹೆಚ್ಚು ಸ್ಯಾನಿಟೈಸರ್ ಬಳಸಿದ್ದರಿಂದ ಬೀಡಿ, ಸಿಗರೇಟ್ ಸೇದುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯವಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರಬಹುದು ಎಂದು ಆರಂಭದಲ್ಲಿ ಎಲ್ಲರೂ ಭಾವಿಸಿದ್ದರು.

Police Jeep 1 2 medium

ಅನುಮಾನಗೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ರೌಡಿಶೀಟರ್ ಮೆಹಬೂಬ್ ಎಂಬುವವನು ರಮೇಶ್ ಮುಖಕ್ಕೆ ಬೆಂಕಿ ಹಚ್ಚಿ ಪರಾರಿಯಾಗುತ್ತಿರುವುದು ಮತ್ತು ಪ್ರಾಣ ಉಳಿಸಿಕೊಳ್ಳಲು ರಮೇಶ್ ತನ್ನ ಬಟ್ಟೆಯನ್ನೆಲ್ಲ ಕಿತ್ತೆಸೆದು ಬೆಂಕಿ ಆರಿಸಿಕೊಳ್ಳಲು ಯತ್ನಿಸಿದ ದೃಶ್ಯ ಕಂಡು ಬಂದಿದೆ. ಅರಸೀಕೆರೆ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಅಶೋಕ್, ಎಸ್‍ಐ ಕುಮಾರ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ ತಂಡಕ್ಕೆ ಎಸ್‍ಪಿ ಶ್ರೀನಿವಾಸ್‍ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *