ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಲ್ವರು ಪೊಲೀಸರು ಸೇರಿದಂತೆ ಹಾಸನದಲ್ಲಿ ಇಂದು ಒಟ್ಟು 15 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಪೊಲೀಸರು ಹಾಗೂ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ನಾಲ್ವರು ಪೊಲೀಸರಲ್ಲಿ ಮೂವರು ಪೊಲೀಸರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, ನಂತರ ಅವರು ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‍ಒ ಸತೀಶ್ ತಿಳಿಸಿದ್ದಾರೆ.
ಹೊಳೆನರಸೀಪುರದ ನಾಲ್ವರು ಪೊಲೀಸರು ಮಾಜಿ ಸಚಿವ ರೇವಣ್ಣ ಅವರ ಬೆಂಗಾವಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಇಲ್ಲವೋ ಎಂಬುದು ತಿಳಿದಿಲ್ಲ. ಈ ಬಗ್ಗೆ ಎಸ್‍ಪಿ ಗಮನಕ್ಕೆ ತಂದಿದ್ದೇವೆ. ಹಾಸನದಲ್ಲಿ ಇದುವರೆಗೂ 397 ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದ್ದು, ಅದರಲ್ಲಿ 246 ಜನ ಗುಣಮುಖರಾಗಿದ್ದಾರೆ. 148 ಆಕ್ಟೀವ್ ಕೇಸ್ ಇದ್ದು, ಎಲ್ಲರೂ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‍ಒ ತಿಳಿಸಿದ್ದಾರೆ.