ಹಾಸನದಲ್ಲಿ ಗುಂಡಿನ ಸದ್ದು- ಜೋಡಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

Public TV
2 Min Read
hsn firing 1

– ಆರೋಪಿ ಮೊಣಕಾಲಿಗೆ ಗುಂಡು ಹಾರಿಸಿ ಬಂಧನ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಆಲಗೊಂಡನಹಳ್ಳಿಯಲ್ಲಿ ಇಂದು ಗುಂಡಿನ ಶಬ್ದ ಕೇಳಿಸಿದ್ದು, ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್ ಮಾಡುವ ಮೂಲಕ ಪೊಲೀಸರು ಬಂಧಿಸಿದ್ದಾರೆ.

vlcsnap 2020 09 01 20h25m05s012

ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಎಡಗಾಲಿನ ಮಂಡಿ ಭಾಗಕ್ಕೆ ಗುಂಡೇಟು ಹೊಡೆಯಲಾಗಿದೆ. ಆಲಗೊಂಡನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮುರುಳಿಧರ್ (71), ಉಮಾದೇವಿ (67) ಅವರನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗ ಇಬ್ಬರನ್ನು ಬಂಧಿಸಲಾಗಿದೆ.

vlcsnap 2020 09 01 20h26m49s689

ಕೋಳಿ ಫಾರಂನಲ್ಲಿ ಆರೋಪಿಗಳು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ ಶರಣಾಗುವಂತೆ ಮನವಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಗಳು ಇನ್‍ಸ್ಪೆಕ್ಟರ್ ವಿನಯ್ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ.

vlcsnap 2020 09 01 20h26m41s684

ವಿನಯ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ ಆರೋಪಿಗಳು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 80 ಎಕರೆ ಜಮೀನು ಹೊಂದಿದ್ದ ಮುರುಳಿಧರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಆ ಜಮೀನನ್ನು ಮಾರಿ ಮನೆಯಲ್ಲಿ ದುಡ್ಡು ಇಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಈ ವೇಳೆ ವೃದ್ಧ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

vlcsnap 2020 09 01 20h25m49s458

ಈ ವಿಚಾರವಾಗಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎರಡು ದಿನಗಳ ಹಿಂದೆ ಜೋಡಿ ಕೊಲೆಯಾಗಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ನಮ್ಮ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ತೆರಳಿದ ವೇಳೆ ಆರೋಪಿಗೆ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿ ಶರಣಾಗದೇ ಪೊಲೀಸರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

vlcsnap 2020 09 01 20h27m28s131

ಆರೋಪಿ ಮತ್ತು ಸಿಪಿಐ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದೆ. ಸರಣಿ ಕೊಲೆಯಾಗುತ್ತಿರುವ ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮ ಕೈಗೊಂಡು ನಿಗಾ ವಹಿಸಿದ್ದೇವೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *