ಚಿಕ್ಕಮಗಳೂರು: ಜಗತ್ತಿಗೆ ಕಂಟಕವಾಗಿರೋ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂದಬಾಹುಗಳನ್ನು ಚಾಚಿಕೊಳ್ಳುತ್ತಿದೆ. ಗ್ರೀನ್‍ಝೋನ್ ಆಗಿದ್ದ ಶಿವಮೊಗ್ಗಕ್ಕೆ ಕಾಲಿಟ್ಟಿದ್ದ ಕೊರೊನಾ ಇಂದು ಹಾಸನಕ್ಕೂ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಹಾಸನ-ಶಿವಮೊಗ್ಗ ಗಡಿ ಜಿಲ್ಲೆಯಾದ ಕಾಫಿನಾಡು ಚಿಕ್ಕಮಗಳೂರಿಗರಲ್ಲಿ ಆತಂಕ ಹೆಚ್ಚಾಗಿದ್ದು, ಮತ್ತೆ ಮಲೆನಾಡಿನ ರಸ್ತೆಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಹಾಸನದಲ್ಲಿ ಇಂದು ಐದು ಪಾಸಿಟಿವ್ ಕೇಸ್ ದೃಢವಾಗುತ್ತಿದಂತೆ ಮಲೆನಾಡು ಭಾಗದಲ್ಲಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಮತ್ತೆ ಬಂದ್ ಮಾಡುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಗ್ರಾಮೀಣ ಭಾಗದಿಂದ ಸಖಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮರಗುಂದ-ದೇವಾಲಕೆರೆಯ ಜಪಾವತಿ ಸೇತುವೆ ಮೇಲೆ ಬೃಹತ್ ಬಂಡೆಕಲ್ಲುಗಳನ್ನ ರಸ್ತೆಗೆ ಅಡ್ಡಲಾಗಿ ಹಾಕಿ ಸಂಚಾರವನ್ನ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.
Advertisement
Advertisement
ಈ ಮಾರ್ಗವಾಗಿ ಯಾರೂ ಹೋಗುವಂತಿಲ್ಲ, ಬರುವಂತಿಲ್ಲ. ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಗ್ರೀನ್‍ಝೋನ್ ಜಿಲ್ಲೆಗಳ ಪಟ್ಟಿಯಲ್ಲೇ ಕಾಫಿನಾಡು ಉಳಿದುಕೊಳ್ಳಲಿ ಎಂದು ಹಳ್ಳಿಗರು ಈ ನಿರ್ಧಾಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸರ್ಕಾರ ಕೂಡ ಲಾಕ್‍ಡೌನನ್ನು ಸಡಿಲಿಕೆ ಮಾಡಿರುವುದರಿಂದ ಹೊರಜಿಲ್ಲೆಗಳಿಗೆ ಹೋಗಿ ಬರುತ್ತಿರುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಪರಿಣಾಮ ಮಲೆನಾಡಿಗರೇ ಸ್ವಯಂ ಪ್ರೇರಿತರಾಗಿ ರಸ್ತೆಗಳನ್ನ ಬಂದ್ ಮಾಡಿ ಕಾಫಿನಾಡನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ. ಈ ಮಧ್ಯೆ ದಕ್ಷಿಣ ಕನ್ನಡದಿಂದ ಕೊಟ್ಟಿಗೆಹಾರ ಮೂಲಕ ಎಗ್ಗಿಲ್ಲದೆ ಬರುತ್ತಿರುವ ನೂರಾರು ಜನರಿಂದ ಈ ಮಹಾಮಾರಿ ಯಾವಾಗ ಕಾಫಿನಾಡಿಗೆ ಕಾಲಿಡುತ್ತೋ ಎಂಬ ಆತಂಕ ಹೆಚ್ಚಾಗಿದೆ.