ಚಾಮರಾಜನಗರ: ವರುಣನ ಅಬ್ಬರದಿಂದ ಒಂದೆಡೆ ಅಪಾರ ಆಸ್ತಿಪಾಸ್ತಿ ನಷ್ಟವಾಗಿದ್ದರೆ ಇನ್ನೊಂದೆಡೆ ರುದ್ರರಮಣೀಯ ದೃಶ್ಯಕ್ಕೂ ಸಾಕ್ಷಿಯಾಗಿದೆ.
ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕು ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಭೋರ್ಗೆರೆದು ಧುಮ್ಮಿಕ್ಕುತ್ತಿದೆ. ಆದರೆ ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ ಇಲ್ಲದಂತಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಭರಚುಕ್ಕಿ ಜಲಪಾತಕ್ಕೂ ಪ್ರವಾಸಿಗರ ಪ್ರವೇಶ ಇಲ್ಲದಂತಾಗಿದೆ. ಕೊಳ್ಳೇಗಾಲ ತಾಲೂಕು ಶಿವನಸಮುದ್ರದ ಬಳಿ ಗಗನಚುಕ್ಕಿ, ಭರಚುಕಿ ಭೋರ್ಗೆರೆದು ಧುಮ್ಮಿಕುತ್ತಿದೆ.
ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ 60 ಅಡಿ ಆಳಕ್ಕೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣೆಗಳೆರಡು ಸಾಲದಂತೆ ಭಾಸವಾಗುತ್ತಿದೆ.
ಪ್ರವಾಸಿಗರಿಗೆ ನಿರ್ಬಂಧ ತೆರುವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಲಪಾತದ ಸೊಬಗು ಸವಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಸಮಿತಿ ಸಭೆ ಕರೆದು ಇನ್ನೆರಡು ದಿನದಲ್ಲಿ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.