– ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆ ಸಾಧ್ಯತೆ
ಮಡಿಕೇರಿ/ಮಂಗಳೂರು: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದೆ.
8.5 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 6.5 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಭಾರೀ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 4,864 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭರ್ತಿಗೆ ಇನ್ನೂ ಎರಡು ಟಿಎಂಸಿ ಅಡಿ ನೀರು ಅಗತ್ಯವಿರುವಾಗಲೇ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹಾರಿಸಲಾಗುತ್ತಿದೆ. ಸದ್ಯಕ್ಕೆ ಜಲಾಶಯದ ಮೂರು ಕ್ರೆಸ್ ಗೇಟ್‍ಗಳನ್ನು ತೆಗೆದು 5 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಹಾರಿಸಲಾಗುತ್ತಿದೆ.
Advertisement
Advertisement
ಕಳೆದ ಎರಡು ವರ್ಷಗಳಲ್ಲೂ ಹಾರಂಗಿ ಜಲಾಶಯದಿಂದ ತಡವಾಗಿ ನೀರು ಹರಿಸಲಾಗಿತ್ತು. ಜೊತೆಗೆ ಕಾವೇರಿ ನದಿಯಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಜಲಾಶಯದ ನೀರು ಸಹ ನದಿಗೆ ಒಮ್ಮೆಲೆ ಸೇರಿ ಪ್ರವಾಹ ಉಂಟಾಗಿತ್ತು. ಇದರಿಂದ ಹತ್ತಾರು ಬಡಾವಣೆಗಳ ಸಾವಿರಾರು ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಹೀಗಾಗಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಲ್ಲಿ ಭಾರೀ ನೀರು ಸಂಗ್ರಹವಾಗುವ ಮೊದಲೇ ನದಿಗೆ ನೀರು ಹರಿಸಿದ್ದಾರೆ.
Advertisement
Advertisement
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆ:
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಂದೂ ಮಳೆ ಮುಂದುವರೆದಿದೆ. ಮುಂಜಾನೆಯಿಂದಲೇ ಜಿಲ್ಲಾದ್ಯಂತ ಕತ್ತಲು ಆವರಿಸಿ ಗಾಳಿ ಮಳೆಯಾಗುತ್ತಿದೆ. ಜಿಲ್ಲೆಯ ಸುಬ್ರಹ್ಮಣ್ಯ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಪಶ್ಚಿಮ ಘಟ್ಟದಲ್ಲೂ ಹೆಚ್ಚಿನ ಮಳೆಯಾಗಿದ್ದು, ಜೀವನದಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೂ ನೀರಿನ ಹರಿವು ಹೆಚ್ಚಳವಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆ ಇದೆ. ಪುತ್ತೂರು ಹಾಗೂ ಪಾಣಾಜೆ ಸಂಪರ್ಕಿಸುವ ಚೇಳ್ಯಡ್ಕ ಸೇತುವೆ ಮುಳುಗಡೆಯಾಗಿದ್ದು, ಅಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೂರು ಜಿಲ್ಲೆಯ ಮೀನುಗಾರರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.