ಮಡಿಕೇರಿ: 15 ದಿನಗಳಲ್ಲಿ ಕೊಡಗಿನಲ್ಲಿ ಮಳೆಗಾಲ ಶುರುವಾಗ ನಿರೀಕ್ಷೆ ಇದ್ದು, ಅಣೆಕಟ್ಟೆಗೆ ನೀರು ಹರಿದು ಬರಲಾರಂಭಿಸುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಿನ್ನೀರು ಪ್ರದೇಶದ ನಿವಾಸಿಗಳು ಈ ಬಾರಿಯೂ ಆತಂಕಗೊಂಡಿದ್ದಾರೆ. ಹಾರಂಗಿ ಜಲಾಶಯದ ಹೂಳೆತ್ತುವ ಉದ್ದೇಶಕ್ಕಾಗಿಯೇ 2019ರ ಬಜೆಟ್‍ನಲ್ಲೇ 130 ಕೋಟಿ ರೂ. ನೀಡಿದ್ದರೂ ಕೆಲಸ ಶುರು ಮಾಡದಿರುವುದು ಸಂಬಂಧಿಸಿದವರ ಬದ್ಧತೆಯನ್ನೇ ಪ್ರಶ್ನಿಸುವಂತಿದೆ.
ನೀರಿನ ಸಂಗ್ರಹದ ಪ್ರಮಾಣದಲ್ಲಿ ಕುಸಿತ!: 2018ರ ಆಗಸ್ಟ್ 13, 14 ಹಾಗೂ 15ರಂದು ಹಾರಂಗಿ ಜಲಾನಯನ ಪ್ರದೇಶದಲ್ಲಿ ಬರುವ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಭಾಗಗಳಲ್ಲಿ ಕುಂಭದ್ರೋಣ ಮಳೆ ಸುರಿದಿತ್ತು. ಈ ಬೆನ್ನಲ್ಲೇ ಬಹುತೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ, ಬೆಟ್ಟದಿಂದ ಕುಸಿದು ಬಂದಿದ್ದ ಮಣ್ಣು ಹಾರಂಗಿ ಮತ್ತು ಅದರ ಉಪನದಿಗಳ ಮೂಲಕ ಜಲಾಶಯ ತಲುಪಿತ್ತು. ಹಾಗಾಗಿ ಜಲಾಶಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹೂಳು ನಿಂತಿದ್ದರಿಂದ ನೀರಿನ ಸಂಗ್ರಹ ಪ್ರಮಾಣದಲ್ಲಿ ಕುಸಿತವಾಗಿದೆ.
Advertisement
Advertisement
ಅಂದಾಜು 1 ಟಿಎಂಸಿಗೂ ಅಧಿಕ ಹೂಳಿನ ಸಂಗ್ರಹ: ಕರ್ನಾಟಕ ಇಂಜಿನಿಯರ್ ರಿಸರ್ಚ್ ಸ್ಟೇಷನ್ ಒಪ್ಪಿಸಿದ ಜವಾಬ್ದಾರಿ ಹಿನ್ನೆಲೆಯಲ್ಲಿ ಜಿಯೋ ಮೆರೈನ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯ 8 ಮಂದಿ ತಜ್ಞರ ತಂಡ 2019ರ ಫೆಬ್ರವರಿಯಲ್ಲಿ ಬಾತಿಮೆಟ್ರಿಕ್ ಸರ್ವೆ ಮತ್ತು ಹೈಡ್ರೋಗ್ರಾಫಿಕ್ ಸರ್ವೆ ಎನ್ನುವ ವಿಧಾನಗಳ ಮೂಲಕ ಹಿನ್ನೀರಿನಲ್ಲಿ ವಿಸ್ತೃತ ಅಧ್ಯಯನ ನಡೆಸಿ ಹೂಳಿನ ಅಂದಾಜು ಸಮೀಕ್ಷೆ ನಡೆಸಿತ್ತು. ಇವರ ಪ್ರಕಾರ 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಅಂದಾಜು 1 ಟಿಎಂಸಿಗೂ ಅಧಿಕ ಹೂಳಿನ ಸಂಗ್ರಹ ಇದೆ. ಈ ಬಾರಿಯೂ ಹೂಳು ತೆಗೆಯದೆ ಇರುವ ಕಾರಣ ಹಾರಂಗಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಮತ್ತೆ ಆಂತಕ ವಾತಾವರಣ ಮೂಡಿದೆ.