ಉಡುಪಿ: ಹಾಡಹಗಲೇ ಯುವಕನ ಕತ್ತು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ.
ಕಾಪು ತಾಲೂಕಿನ ಇನ್ನ ಗ್ರಾಮದ ಕಿಶನ್ ಹೆಗ್ಡೆ ಮೃತಪಟ್ಟ ಯುವಕ. ಹಿರಿಯಡ್ಕ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ಬಂದು ಬರ್ಬರವಾಗಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕಿಶನ್ ಹೆಗ್ಡೆ ತನ್ನ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದಾಗ ಉಡುಪಿ ಕಡೆಯಿಂದ ಎರಡು ಕಾರುಗಳು ಬಂದಿವೆ. ಕಾರಿನಲ್ಲಿ ಎಂಟು ಮಂದಿ ಯುವಕರಿದ್ದರು ಎನ್ನಲಾಗಿದೆ. ನಂತರ ಸ್ಥಳದಲ್ಲಿ ಕೆಲಕಾಲ ವಾಗ್ವಾದ ನಡೆದಿದ್ದು, ಕಿಶನ್ ಹೆಗ್ಡೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಯುವಕರ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ತಲೆಯ ಹಿಂಭಾಗಕ್ಕೆ ಮತ್ತು ಕುತ್ತಿಗೆಗೆ ಬಲವಾದ ಪೆಟ್ಟಾಗಿದ್ದು, ಕಿಶನ್ ಹೆಗ್ಡೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರ ನೀಡಿದ್ದಾರೆ.
ಕಿಶನ್ ಹೆಗ್ಡೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಸಣ್ಣಪುಟ್ಟ ಅಪರಾಧಿ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗಾಗಿ ಹಳೆ ವೈಷಮ್ಯಕ್ಕೆ ಕೊಲೆ ನಡೆದಿರಬಹುದು ಎನ್ನಲಾಗಿದೆ. ಸದ್ಯಕ್ಕೆ ಹಿರಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ದುಷ್ಕರ್ಮಿಗಳ ತಂಡ ಯಾವುದು, ದುಷ್ಕೃತ್ಯ ಎಸಗಿ ತಂಡ ಪರಾರಿಯಾಗಿ ಎಲ್ಲಿ ತಲೆಮರೆಸಿಕೊಂಡಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.