ಚಿಕ್ಕಬಳ್ಳಾಪುರ: ಬಾವನನ್ನು ಕೊಂದು ಬಾಮೈದ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದವರು ಬಾಗೇಪಲ್ಲಿ ಮೂಲದ ನವೀನ್(30) ಎನ್ನಲಾಗಿದೆ. ನವೀನ್ ಪತ್ನಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಭಾವನನ್ನೇ ಕೊಂದಿದ್ಯಾಕೆ?
ಕೊಲೆಯಾದ ನವೀನ್ ಕರೇನಹಳ್ಳಿ ನಿವಾಸಿ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣ ಆಕೆ ತವರುಮನೆ (ಕರೇನಹಳ್ಳಿ) ಸೇರಿದ್ದಳು. ಈ ನಡುವೆ ಮಕ್ಕಳ ವಿಚಾರ ಹಾಗೂ ಸಂಸಾರ ಸರಿಪಡಿಸುವ ವಿಚಾರವಾಗಿ ರಾಜಿ ಪಂಚಾಯಿತಿ ಪ್ರಯತ್ನ ಮುಂದುವರೆದಿದ್ದು, ಶನಿವಾರ ರಾತ್ರಿ ರಾಜಿಗೆಂದು ಕರೇನಹಳ್ಳಿಗೆ ನವೀನ್ ಬಂದಿದ್ದಾನೆ. ಈ ವೇಳೆ ಮಡದಿಯ ಕುಟುಂಬದವರೊಂದಿಗೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ಸ್ಥಳೀಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲು ನವೀನ್ ಮಡದಿಯ ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಷ್ಟರಲ್ಲಿ ಕರೇನಹಳ್ಳಿಯ ಹೊರಭಾಗದಲ್ಲಿ ನವೀನ್ ಮಡದಿಯ ತಮ್ಮ ವೆಂಕಟೇಶ್ ಹಾಗೂ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ನಡೆಯುವಾಗ ಈ ಸ್ಥಳದಲ್ಲಿ ಕೆಲ ಹುಡುಗರು ಆಟವಾಡುತ್ತಿದ್ದು, ಹತ್ಯೆ ಕಂಡು ಆತಂಕಗೊಂಡು ಓಡಿದ್ದಾರೆ.
ಅಲ್ಲದೆ ಹಾಡಹಗಲೇ ನಗರದಲ್ಲಿ ಹತ್ಯೆ ನಡೆದಿರುವ ಹಿನ್ನೆಲೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.