– ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಯುದ್ಧದ ಕುರಿತು ಸ್ಪಷ್ಟನೆ
ಬೀಜಿಂಗ್: ಗಡಿ ವಾಸ್ತವಿಕ ರೇಖೆ ಬಳಿ ಯುದ್ಧದ ಪರಿಸ್ಥಿತಿ ಉಂಟಾಗಿರುವಾಗಲೇ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದು, ಯುದ್ಧದ ಕುರಿತು ಸ್ಪಷ್ಟಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದಲ್ಲಿ ಮಾತನಾಡಿರುವ ಕ್ಸಿ ಜಿನ್‍ಪಿಂಗ್, ಚೀನಾ ಯಾವುದೇ ದೇಶದೊಂದಿಗೆ ಹಾಟ್ ಅಥವಾ ಕೋಲ್ಡ್ ಯಾವುದೇ ರೀತಿಯ ಯುದ್ಧವನ್ನು ನಡೆಸುವ ಉದ್ದೇಶ ಹೊಂದಿಲ್ಲ. ದೇಶಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹೊಂದುವುದು ಸಹಜ. ಆದರೆ ಇವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಚೀನಾದಿಂದ ಕುತಂತ್ರದ ಮೇಲೆ ಕುತಂತ್ರ- ಎಲ್‍ಎಸಿ ಬಳಿ ಶಸ್ತ್ರಸಜ್ಜಿತ ಯೋಧರ ಜಮಾವಣೆ
ನಾವು ಸಂವಾದ, ಸಮಾಲೋಚನೆ ಮೂಲಕ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಇದೇ ರೀತಿ ವಿವಾದಗಳನ್ನೂ ಪರಿಹರಿಸಿಕೊಳ್ಳುತ್ತೇವೆ. ನಾವು ನಮ್ಮನ್ನು ಮಾತ್ರ ಅಭಿವೃದ್ಧಿಪಡಿಸಲು ಅಥವಾ ಝೀರೋ-ಸಮ್ ಗೇಮ್ ನಲ್ಲಿ ತೊಡಗಿಸಿಕೊಳ್ಳಲು ಯತ್ನಿಸುವುದಿಲ್ಲ ಎಂದು ಕ್ಸಿ ಜಿನ್‍ಪಿಂಗ್ ಹೇಳಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ವಿಶ್ವ ಸಂಸ್ಥೆ ನಡೆಸಿದ ವಿಶ್ವ ನಾಯಕರ ವಾರ್ಷಿಕ ವಿಡಿಯೋ ಸಂವಾದದಲ್ಲಿ ಜಿನ್‍ಪಿಂಗ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅವರ ಈ ಹೇಳಿಕೆ ಸಹ ವಿಡಿಯೋ ರೂಪದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಪೂರ್ವ ಲಡಾಕ್ ಗಡಿಯಲ್ಲಿ ಗುಂಡಿನ ಸದ್ದು – ಇಂದು ಭಾರತ, ಚೀನಾ ನಡುವೆ ಮಹತ್ವದ ಸಭೆ
ಚೀನಾ ಸೈನಿಕರ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಭಾರತೀಯ ಸೈನಿಕರು ನಡೆಸಿದ ಪ್ರತಿ ದಾಳಿಗೆ ಚೀನಾದ ಹಲವು ಸೈನಿಕರು ಸಹ ಸಾವನ್ನಪ್ಪಿದ್ದರು. ಆದರೆ ಚೀನಾ ಈ ಕುರಿತು ಬಾಯ್ಬಿಟ್ಟಿರಲಿಲ್ಲ. ಈ ಘಟನೆ ನಡೆದ ಬಳಿಕ ಹಲವು ಬಾರಿ ಗಡಿಯಲ್ಲಿ ಗುಂಡಿನ ಚಕಮಕಿ, ಸಂಘರ್ಷ ನಡೆದಿದೆ. ಅದೇ ರೀತಿ ಎರಡೂ ದೇಶಗಳ ಪ್ರಮುಖರ ನಡುವೆ ಸಭೆಗಳು ಸಹ ನಡೆದಿವೆ. ಆದರೆ ಚೀನಾ ತನ್ನ ಕುತಂತ್ರ ಬುದ್ಧಿಯನ್ನು ಮಾತ್ರ ಬಿಟ್ಟಿಲ್ಲ.
ಗಲ್ವಾನ್ ವ್ಯಾಲಿ, ಹಾಟ್ ಸ್ಪ್ರಿಂಗ್ಸ್ ಹಾಗೂ ಕೊಂಗ್ರಂಗ್ ನಾಲೆ ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಚೀನಾ ಸೇನೆ ನಿಯಮ ಉಲ್ಲಂಘಿಸಿ ಅತಿಕ್ರಮಣ ಮಾಡುತ್ತಿದೆ. ಹೀಗಾಗಿ ಏಪ್ರಿಲ್-ಮೇ ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷ ನಡೆಯುತ್ತಿದೆ.