– ಹಸು ಬಂದ ದಿನದಿಂದ ಮನೆಯಲ್ಲಿ ಸಮಸ್ಯೆ ನಿವಾರಣೆ
– ಮನೆ ಮಗಳಿಗೆ ಮಾಡುವಂತೆ ನಡೆಯಿತು ಸೀಮಂತ
– ಗೋವಿಗೆ ಸೀರೆಯುಡಿಸಿ, ಮುತ್ತೈದೆಯರಿಂದ ಆರತಿ
ಚಿಕ್ಕೋಡಿ(ಬೆಳಗಾವಿ): ಗೋವು ದೇವರ ಸ್ವರೂಪಿ, ರೈತರು ಗೋವಿಗೆ ವಿಶೇಷ ಸ್ಥಾನ ಮಾನಕೊಡುತ್ತಾರೆ. ಆದರೆ ಇಲ್ಲೊಂದು ರೈತ ಕುಟುಂಬ ಗೋವಿಗೆ ಸೀಮಂತ ಕಾರ್ಯವನ್ನು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಯಕ್ಸಂಬಾ ಪಟ್ಟಣದ ಕುಟುಂಬಸ್ಥರು ಗೋವಿಗೆ ಸೀಮಂತ ಮಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ತುಕಾರಾಮ್ ಮಾಳಿ ಎಂಬವರ ಕುಟುಂಬ ಒಂದು ವರ್ಷದ ಹಿಂದೆ ಆಕಳನ್ನ ಖರೀದಿ ಮಾಡಿ ಮನೆಗೆ ತಂದಿದ್ದಾರೆ. ಹಸು ಮನೆಗೆ ಬಂದ ದಿನದಿಂದಲೂ ಮನೆಯಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಜಗಳ ನಿಂತಿದ್ದವು ಹಾಗೂ ಆರ್ಥಿಕ ಸ್ಥಿತಿಗತಿ ಕೂಡ ಸುಧಾರಿಸಿತ್ತು. ಇದನ್ನೆಲ್ಲಾ ನೋಡಿದ ತುಕಾರಾಮ್, ಆಕಳನ್ನ ಮನೆಯ ಮಗಳಂತೆ ನೋಡಿಕೊಳ್ಳಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಇದಕ್ಕೆ ಗೌರಿ ಅಂತ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದಾರೆ.
Advertisement
Advertisement
ಕಳೆದ ಐದು ತಿಂಗಳ ಹಿಂದಷ್ಟೇ ಗೌರಿ ಗರ್ಭ ಧರಿಸಿದ್ದಳು. ಅಂದಿನಿಂದಲೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಐದು ತಿಂಗಳು ಮುಗಿದ ಬಳಿಕ ಮಗಳಿಗೆ ಹೇಗೆ ತವರು ಮನೆಯವರು ಸೀಮಂತ ಮಾಡ್ತಾರೆಯೋ ಅದೇ ಮಾದರಿಯಲ್ಲಿ ಇಂದು ಅದ್ಧೂರಿಯಾಗಿ ಗೌರಿಗೆ ಸೀಮಂತ ಮಾಡಿದ್ದಾರೆ. ಮನೆಯ ಮುಂದೆ ಶಾಮಿಯಾನ, ಮನೆಗೆಲ್ಲಾ ಸಿಂಗಾರ, ಹೂಗಳಿಂದ ಸಿಂಗರಿಸಿ, ಕೊರಳಲ್ಲಿ ಸೀರೆಯುಡಿಸಿ, ಮುತ್ತೈದೆಯರು ಆರತಿ ಮಾಡಿ ಬಗೆ ಬಗೆಯ ಅಡುಗೆ ಮಾಡಿ ಮೊದಲು ಗೌರಿಗೆ ಕೊಟ್ಟು ಮಂಗಳಾರತಿ ಮಾಡಿ ಸೀಮಂತ ಕಾರ್ಯ ಮಾಡಿದ್ದಾರೆ.
Advertisement
ಸೀಮಂತ ಮಾಡುವ ಎರಡು ದಿನ ಪೂರ್ವದಿಂದಲೂ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು, ಊರಲ್ಲಿದ್ದ ಸಂಬಂಧಿಕರನ್ನೂ ಕರೆಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ಗ್ರಾಮದ ಜನರನ್ನ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬೆಳಗ್ಗೆ ಎಂಟು ಗಂಟೆಗೆ ಗೌರಿಯ ಮೈತೊಳೆದು ನಂತರ ಬಣ್ಣ ಬಳಿದು ಮಲ್ಲಿಗೆ, ಸೇವಂತಿ, ಚೆಂಡು ಹೂಗಳಿಂದ ಅಲಂಕಾರ ಮಾಡಲಾಯಿತು. ಇದಾದ ಬಳಿಕ ಗೌರಿ ಕಣ್ಣಿಗೆ ಕಾಡಿಗೆ ಬಳಿದು ಕೊರಳಲ್ಲಿ ಸೀರೆಯನ್ನ ಹಾಕಿ ಆರತಿ ಬೆಳಗೆ ಮಂಗಳಾರತಿಯನ್ನ ಹೇಳಿ ಪೂಜೆ ಸಲ್ಲಿಸಲಾಯಿತು.
ಇತ್ತ ಬಗೆ ಬಗೆಯ ಅಡುಗೆಯನ್ನ ಮಾಡಿದ್ದು ಮೊದಲು ಗೌರಿಗೆ ಅದನ್ನ ತಿನ್ನಿಸಿ ನಂತರ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಶೀರಾ, ಸಜ್ಜಿಗೆ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ ಬಡಿಸಲಾಯಿತು. ಇನ್ನೂ ಮನೆ ಮಗಳ ಸೀಮಂತ ಕಾರ್ಯ ಕೂಡ ಇಷ್ಟೊಂದು ಅದ್ಧೂರಿಯಾಗಿ ಮಾಡುತ್ತಿರಲಿಲ್ಲ, ಅದಕ್ಕಿಂತ ಹೆಚ್ಚಾಗಿ ಇಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಸೀಮಂತ ಕಾರ್ಯ ಮಾಡಲಾಯಿತು.
ಹಸುವನ್ನು ಮಗಳಂತೆ ನೋಡಿಕೊಂಡು ಅದ್ಧೂರಿಯಾಗಿ ಇಂದು ಸೀಮಂತ ಮಾಡಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೈತರು ಅಂದ್ರೆ ಹಾಗೇನೆ ಅನ್ಸತ್ತೆ ಮನೆಯಲ್ಲಿ ಸಾಕುವ ಪ್ರತಿಯೊಂದು ಪ್ರಾಣಿಗಳಿಗೂ ಒಂದು ಸ್ಥಾನ ಮಾನ ಕೊಟ್ಟು ಮನಷ್ಯರಿಗಿಂತ ಹೆಚ್ಚಾಗಿ ಅವುಗಳನ್ನ ಸಾಕಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.