ಹಾಸನ: ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ವ್ಯಕ್ತಿಯೊಬ್ಬರು ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದ ಅಗಳನ್ನು ಹುಡುಕಿ ತಿನ್ನುತ್ತಿದ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಥಿ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನಕಲಕುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ರಾಜು (38) ಎಂಬವರು ಹೊಟ್ಟೆ ಹಸಿವು ತಾಳಲಾರದೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯಲ್ಲಿನ ಅನ್ನವನ್ನು ತಿನ್ನುತ್ತಿದ್ದರು.
ದಾರಿಹೋಕ ಸಾರ್ವಜನಿಕರೊಬ್ಬರು ವಿಚಾರಿಸಿದಾಗ, ಹೊಟ್ಟೆ ಹಸಿವು ತಾಳಲಾರದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ಆಲೂರಿಗೆ ಬಂದಿದ್ದೆ. ಆದರೆ ಈಗ ಕೆಲಸ ಕೈ ಕೊಟ್ಟಿದ್ದು ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ ಎಂದು ರಾಜು ಅಸಹಾಯಕತೆ ಹೊರಹಾಕಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಅನ್ನ-ಸಾಂಬರು ತಂದು ನೀಡಿ ಊಟ ಬಡಿಸಿದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಿಬ್ಬಂದಿ ಜೊತೆಗೆ ಬಂದು ರಾಜು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.