ಬೆಂಗಳೂರು: ಈ ಬಾರಿಯ ದೀಪಾಳಿ ಹಬ್ಬದಲ್ಲಿ ಹಸಿರು ಪಟಾಕಿ ಹಚ್ಚಲು ಮಾತ್ರ ಅವಕಾಶ ನೀಡಿದೆ. ಈ ವಿಚಾರವಾಗಿ ಮಾಧ್ಯಮ ಪ್ರಕಟನೆ ಹೊರಡಿಸಿರುವ ರಾಜ್ಯ ಸರ್ಕಾರ ಹೆಚ್ಚು ಶಬ್ದವಲ್ಲದ, ಮಾಲಿನ್ಯವಲ್ಲದ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ.
ಕೊರೊನಾ 2ನೇ ಅಲೆ ಅಪ್ಪಳಿಸೋದನ್ನು ತಡೆಯೋ ಸಲುವಾಗಿ ರಾಜ್ಯಾದ್ಯಂತ ಯಡಿಯೂರಪ್ಪ ಸರ್ಕಾರ ಪಟಾಕಿ ಬ್ಯಾನ್ ಮಾಡಿದೆ. ದೀಪಾವಳಿ ಹೊತ್ತಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಯಾವುದೇ ಬಗೆಯ ಪಟಾಕಿಗಳನ್ನು ಮಾರಾಟ ಮಾಡುವುದಾಗಲಿ ಅಥವಾ ಹೊಡೆಯುವುದಾಗಲಿ ಮಾಡುವಂತಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದ್ದು, ಜಿಲ್ಲಾಡಳಿತಗಳಿಗೆ ಸುತ್ತೋಲೆ ರವಾನೆ ಆಗಲಿದೆ.
ಕೊರೊನಾ ಸೋಂಕಿತರು ಅದರಲ್ಲೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪಟಾಕಿ ಶಬ್ಧ ಮತ್ತು ವಿಷಕಾರಿ ಹೊಗೆ ತೀವ್ರ ಪರಿಣಾಮ ಬೀರಲಿದೆ. ಇದ್ರಿಂದ ಕೊರೊನಾ ಸಾವು-ನೋವು ಹೆಚ್ಚಳ ಆಗಬಹುದು. ಪಟಾಕಿ ಬ್ಯಾನ್ ಮಾಡೋದು ಒಳಿತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ತಜ್ಞರ ಸಲಹೆ ಪೂರ್ವಕ ಎಚ್ಚರಿಕೆಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ದೀಪಾವಳಿ ಬೆಳಕಿನ ಹಬ್ಬ ಹೀಗಾಗಿ ದೀಪ ಬೆಳಗಿ, ಪಟಾಕಿ ಬೇಡ. ಬೇಕಿದ್ದರೆ ಮಾಲಿನ್ಯಕಾರಕವಲ್ಲದ ಹಸಿರು ಪಟಾಕಿ ಹಚ್ಚಿ ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ರವಾನಿಸಿದ್ದಾರೆ.
ಈಗಾಗಲೇ ದೆಹಲಿ, ಒಡಿಶಾ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಈ ಸಾಲಿಗೆ ಕರ್ನಾಟಕವೂ ಇದೀಗ ಸೇರಿದೆ. ಸರ್ಕಾರದ ನಿರ್ಧಾರವನ್ನು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥರಾದ ಡಾ. ಮಂಜುನಾಥ್ ಸ್ವಾಗತಿಸಿದ್ದಾರೆ. ಪಟಾಕಿಯಿಂದ ಮಾಲಿನ್ಯ ಹೆಚ್ಚಾಗಲಿದೆ. ಜೊತೆಗೆ ಚಳಿಗಾಲವೂ ಇರುವುದರಿಂದ ಸೋಂಕು ಹೆಚ್ಚಳವಾಗಬಹುದು. ಉಸಿರಾಟ ಸಮಸ್ಯೆ ಇರುವ ಸೋಂಕಿತರ ಸ್ಥಿತಿ ಗಂಭೀರ ಆಗಬಹುದು. ಹೀಗಾಗಿ ಪಟಾಕಿ ನಿಷೇಧ ಉತ್ತಮ ನಿರ್ಧಾರ ಎಂದಿದ್ದಾರೆ.