ಉಡುಪಿ: ಜಿಲ್ಲೆಯ ಹಳ್ಳಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಹಳ್ಳಿ ಜನರ ಕಡೆ ಗಮನ ಕೊಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಹಗದೀಶ್ ವಿಲೇಜ್ ಟೂರ್ ಮಾಡಿದ್ದಾರೆ.
ಜಿಲ್ಲೆಯ ಕೋವಿಡ್ ಪೀಡಿತ ಹಳ್ಳಿಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರೆಗೆ ತೆರಳಿ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳ ಜೊತೆ ಸಮಾಲೋಚನೆ ಮಾಡಿದ್ದಾರೆ.
ಜಡಿಮಳೆಯಲ್ಲೂ ಜಿಲ್ಲಾಧಿಕಾರಿ ಹಳ್ಳಿ ಸಂಚಾರ ಮಾಡಿ ಜನಜಾಗೃತಿ ಜೊತೆ ಸೋಂಕಿತರ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದಾರೆ. ಅಗತ್ಯವಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದಾರೆ. ಹೆಬ್ರಿ ತಾಲೂಕು ಮುದ್ರಾಡಿಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿದ್ದು, ಹಳ್ಳಿಗಳಿಂದ ತಾಲೂಕಿಗೆ ಚಿಕಿತ್ಸೆಗೆ ಬರುವವರಿಗೆ ವಾಹನ ವ್ಯವಸ್ಥೆಗೂ ಜಿಲ್ಲಾಡಳಿತ ಚಿಂತನೆ ಮಾಡಿದೆ. ಶಾಸಕರ ಅನುದಾನ ಬಳಸಿಕೊಂಡು 5 ಸಾವಿರ ಆಕ್ಸಿ ಮೀಟರ್ ಗಳನ್ನು ವಿತರಿಸುವ ಯೋಜನೆ ಹೊಂದಿದ್ದಾರೆ.
ಈ ಕುರಿತು ಮಾತನಾಡಿದ ಉಡುಪಿ ಡಿಸಿ ಜಿ.ಜಗದೀಶ್, ಕೇಂದ್ರ ಸರ್ಕಾರದಿಂದ ಬಂದಿರುವ ಆದೇಶದ ಪ್ರಕಾರ ಹಳ್ಳಿಗಳನ್ನು ಕೊರೊನಾ ಮುಕ್ತ ಮಾಡಬೇಕು. ಗ್ರಾಮಾಂತರ ಪ್ರದೇಶದ ಜನರ ಜೊತೆ ಜಿಲ್ಲಾಡಳಿತ ಸದಾ ಇರುತ್ತದೆ. ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದರೆ ಕೇರ್ ಸೆಂಟರ್, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗೆ ಬನ್ನಿ. ಸಾಂಕ್ರಾಮಿಕ ರೋಗ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂದರು.