ಸ್ಯಾಂಡಲ್‌ವುಡ್‌ನಲ್ಲಿ ಹಳ್ಳಿ ಸೊಗಡಿನ ಸಿನಿಮಾವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಮುಗಿಸಿ ಇದೀಗ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಈ ಚಿತ್ರದ ಹೆಸರು ‘ನಿಮ್ಮೂರು’. ಹಠವಾದಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದು ವಿಜಯ್. ಎಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಗ್ರಾಮೀಣ ಭಾಗದ ಜನರ ದಿನನಿತ್ಯದ ಆಗು ಹೋಗುಗಳು, ಪ್ರೀತಿ ಪ್ರೇಮದ ಎಳೆಯ ಜೊತೆ, ಅವರ ಹಾಸ್ಯ ಪ್ರಜ್ಞೆಯನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ವಿಜಯ್. ಎಸ್ ಮಾಡಿದ್ದಾರೆ. ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ, ತಲಕಾಡು, ಸಕಲೇಶಪುರ, ರಾಣೆಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ‘ನಿಮ್ಮೂರು’ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಎಲ್ಲವನ್ನು ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.
ಮನೋರಂಜನಾತ್ಮಕ ಕಥಾಹಂದರ ಒಳಗೊಂಡಿರುವ ‘ನಿಮ್ಮೂರು’ ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಅಭಿನಂದನ್ ಕಶ್ಯಪ್, ಮಧು ಸುದಂಡಿ ಸಂಗೀತ ನಿರ್ದೇಶನವಿದೆ. ಲಕ್ಕಿ ರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಂ, ಸಿದ್ದು ಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಶೇಖರ್, ಚಂದ್ರಶೇಖರ್ ದಾವಣಗೆರೆ ಅವರು ಹಠವಾದಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ಶ್ರೀಘ್ರದಲ್ಲೇ ‘ನಿಮ್ಮೂರು’ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಕಮರ್ಷಿಯಲ್ ಸಿನಿಮಾ ನೋಡಿ ನೋಡಿ ಬೇಸರವಾಗಿದ್ದ ಸಿನಿರಸಿಕರಿಗೆ ಈ ಚಿತ್ರ ಒಂದೊಳ್ಳೆಯ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.