– ದೇವಸ್ಥಾನಕ್ಕೆ ಮೀಸಲಿಟ್ಟಿದ್ದ ಹಣ ನೀಡಿದ ಗ್ರಾಮಸ್ಥರು
ಚಿಕ್ಕಮಗಳೂರು: ಸರ್ಕಾರಿ ಶಾಲೆ ಇಂದೋ, ನಾಳೆಯೋ ಎನ್ನುತ್ತಿದೆ ಹೀಗೆ ಬಿಟ್ಟರೆ ಆಗುವುದಿಲ್ಲ ಎಂದು ಹಳ್ಳಿಗರ ಸಹಕಾರದಲ್ಲಿ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಪ್ರತಿ ಮನೆಯಿಂದ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ್ದಾರೆ. ತಾಲೂಕಿನ ಗಡಿಗ್ರಾಮ ಸಿರಿಬಡಿಗೆ ಶಾಲೆಯೇ ಶಿಕ್ಷಕರಿಂದ ಮರುಜನ್ಮ ಪಡೆದ ಶಾಲೆ. 1 ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ ಪ್ರಸ್ತುತ 48 ಮಕ್ಕಳಿದ್ದಾರೆ. ಕೊರೊನಾ ಬಳಿಕ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸುಮಾರು 20 ಮಕ್ಕಳು ಈಗ ಈ ಶಾಲೆಗೆ ಸೇರಿದ್ದಾರೆ. ಎಂಟು ಕೊಠಡಿಗಳಿವೆ. ಆದರೆ ಶಾಲೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿತ್ತು. ಹೆಂಚುಗಳೂ ಒಡೆದು ಹೋಗಿದ್ದವು. ಶಾಲೆ ಕಳೆದ ಎಂಟು ವರ್ಷಗಳಿಂದ ಸುಣ್ಣ-ಬಣ್ಣ ಕಂಡಿರಲಿಲ್ಲ. ಹಾಗಾಗಿ ಸಿ.ಆರ್.ಪಿ. ಹಾಗೂ ಎಸ್.ಡಿ.ಎಂ.ಸಿ. ಮೀಟಿಂಗ್‍ನಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮಾತುಕತೆಯಲ್ಲಿ ಶಾಲೆಗೆ ಹೊಸ ರೂಪ ನೀಡಿಲು ತೀರ್ಮಾನ ಕೈಗೊಂಡಿದ್ದಾರೆ.
Advertisement
ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ತೀರ್ಮಾನದಂತೆ ಶಾಲೆಗೆ ಪುನರ್ಜನ್ಮ ಸಿಕ್ಕಿದೆ. ಊರಿನ ಮುಖಂಡರು ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ನಮ್ಮೂರ ಶಾಲೆ ನಮ್ಮೂರ ದೇವಸ್ಥಾನವಿದ್ದಂತೆ ಎಂದು ಹಳ್ಳಿಗರು ಸಂಪೂರ್ಣ ಬೆಂಬಲ ನೀಡಿದ ಪರಿಣಾಮ ಅವನತಿಯ ಅಂಚಿನಲ್ಲಿದ್ದ ಸರ್ಕಾರಿ ಶಾಲೆ ಇಂದು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಚಂದಾ ಎತ್ತಿದ ಹಣದಿಂದ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಿ ಇಡೀ ಶಾಲೆಗೆ ಬಣ್ಣ ಹೊಡೆಸಿ ಮಕ್ಕಳು ಕೂರಲು ಕುರ್ಚಿ-ಮೇಜಿನ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಕರಿಗೆ ಮಕ್ಕಳು ಹಾಗೂ ಶಾಲೆ ಮೇಲಿರೋ ಪ್ರೀತಿಗೆ ಸ್ಥಳೀಯರು ಕೂಡ ಅವರ ಕಾರ್ಯಕ್ಕೆ ಕೈಜೋಡಿದ್ದಾರೆ.
Advertisement
Advertisement
ಎರಡೇ ಗಂಟೆಗೆ 35 ಸಾವಿರ ಸಂಗ್ರಹ : ಊರಿನ ಮುಖಂಡರ ಜೊತೆ ಗ್ರಾಮದಲ್ಲಿ ಹೊರಟ ಶಿಕ್ಷಕರಿಗೆ ಹಳ್ಳಿಯ ಸಹೃದಯಿಗಳು ಎರಡೇ ಗಂಟೆಗೆ 35 ಸಾವಿರ ಹಣ ನೀಡಿದ್ದಾರೆ. ಯಾರ ಮನೆ ಬಾಗಿಲಿಗೆ ಹೋದರೂ ಯಾರೂ ಕೂಡ ಬರಿಗೈಲಿ ಕಳಿಸಿಲ್ಲ. ತಮ್ಮ ಶಕ್ತಿಗನುಸಾರವಾಗಿ 100 ರಿಂದ 1000 ರೂಪಾಯಿವರೆಗೆ ಹಣ ನೀಡಿದ್ದಾರೆ. ಕೆಳಗಿನ ಸಿರಿಬಡಿಗೆ, ಮೇಲಿನ ಸಿರಿಬಡಿಗೆ ಎರಡೂ ಏರಿಯಾವನ್ನೂ ಸುತ್ತುವಷ್ಟರಲ್ಲಿ ಗ್ರಾಮಸ್ಥರ ಕೈಯಲ್ಲಿ 35 ಸಾವಿರ ಹಣವಿತ್ತು. ಆ ಹಣವನ್ನ ಗ್ರಾಮಸ್ಥರು ಶಿಕ್ಷಕರು ಕೈಗೆ ನೀಡಿದ್ದಾರೆ. ಆ ಹಣಕ್ಕೆ ಶಿಕ್ಷಕರು ತಾವೂ ಒಂದಿಷ್ಟು ಹಣ ಸೇರಿಸಿ ಶಾಲೆಗೆ ಹೊಸ ಭಾಷ್ಯ ಬರೆದಿದ್ದಾರೆ.
Advertisement
ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನೂ ಕೊಟ್ರು : ಗ್ರಾಮದಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವಿತ್ತು. ಅದು ಪಾಳು ಬಿದ್ದಿತ್ತು. ಪಾಳು ಬೀಳೋದು ಯಾಕೆಂದು ಅದನ್ನ 11 ಸಾವಿರಕ್ಕೆ ಗುತ್ತಿಗೆ ನೀಡಿದ್ದರು. ಆ ಹಣವನ್ನ ಕೆಳಗಿನ ಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿನ ದೇವರಿಗೆಂದು ತಲಾ 5,500 ರೂ. ಹಣವನ್ನ ಹಂಚಿಕೊಂಡು ದೇವಸ್ಥಾನದ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದರು. ಶಾಲೆಗೆ ಸುಣ್ಣ-ಬಣ್ಣ ಹೊಡೆಸುತ್ತಾರೆಂದು ಎರಡು ಏರಿಯಾದ ಜನರೂ ಮಾತನಾಡಿಕೊಂಡು ಆ ಹಣವನ್ನ ಹಾಗೆಯೇ ತಂದು ಶಿಕ್ಷಕರ ಕೈಗಿಟ್ಟಿದ್ದಾರೆ. ದೇವರ ಅಭಿವೃದ್ಧಿಗೆಂದು ಇಟ್ಟಿದ್ದ ಹಣ ಶಾಲೆಯ ಅಭಿವೃದ್ಧಿಗೆ ಸೇರಿತು. ನಮ್ಮೂರ ದೇವಸ್ಥಾನ ಹಾಗೂ ನಮ್ಮ ಮಕ್ಕಳು ಓದೋ ಶಾಲೆ ಎರಡೂ ನಮಗೆ ಬೇರೆ-ಬೇರೆ ಅಲ್ಲ ಅನ್ನೋದು ನಮ್ಮ ಭಾವನೆ ಅಂತಾರೆ ಊರಿನ ಮುಖಂಡರು.
ಸರ್ಕಾರದಿಂದ ಹಣವಿಲ್ಲ : ಶಾಲಾ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಈ ಹಿಂದೆ ವರ್ಷಕ್ಕೆ ಆರು ಸಾವಿರ ಹಣ ಬರುತ್ತಿತ್ತು. ಅದು ಎರಡು ಕಂತಿನಲ್ಲಿ ಮೂರು-ಮೂರು ಸಾವಿರ ಬರುತ್ತಿತ್ತು. ಆ ಹಣ ಸಾಲುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ಕೊರೊನಾ ಕಾಲದಲ್ಲಿ ಆ ಹಣವೂ ಬಂದಿಲ್ಲ. ಹಾಗಾಗಿ, ಸ್ಥಳೀಯರು ಹಾಗೂ ಶಿಕ್ಷಕರೇ ಮಾತನಾಡಿಕೊಂಡು ಊರಲ್ಲಿ ಮನೆ-ಮನೆಯಿಂದ ಚಂದಾ ಎತ್ತಿ ತಮ್ಮೂರಿನ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿ ಹೊಸ ರೂಪ ನೀಡಿದ್ದಾರೆ. ಸ್ಥಳೀಯರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಹಳ್ಳಿಗರ ಈ ಹೃದಯ ಶ್ರೀಮಂತಿಕೆಗೆ ಅಭಿನಂದನೆ ಸಲ್ಲಿಸಿದೆ.