– ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಫ್ಯಾಕ್ಟರಿ
– ತುಂಬಿ ಹರಿಯುತ್ತಿರುವ ಹಳ್ಳಕ್ಕೆ ವಿಷ ನೀರು ಸೇರ್ಪಡೆಯ ಆರೋಪ
ಧಾರವಾಡ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಶುಗರ್ ಫ್ಯಾಕ್ಟರಿಯಿಂದ ಹೊರಬರುತ್ತಿರುವ ಕೆಮಿಕಲ್ ಮಿಶ್ರಿತ್ ನೀರು ಧಾರವಾಡ ಜಿಲ್ಲೆಯ ತುಪ್ಪರಿ ಹಳ್ಳಕ್ಕೆ ಬಂದು ಸೇರಿದ್ದರಿಂದಲೇ ಸಾವಿರಾರು ಮೀನುಗಳ ಸಾವನ್ನಪ್ಪಿವೆ ಎಂದು ಆರೋಪಗಳು ಕೇಳಿ ಬಂದಿವೆ
ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿ ಕಬ್ಬು ನುರಿಸಲು ಆರಂಭಿಸಿದ್ದು, ಎರಡು ದಿನಗಳಿಂದ ಫ್ಯಾಕ್ಟರಿಯಿಂದ ಅಪಾರ ಪ್ರಮಾಣದ ಕೆಮಿಕಲ್ ಮಿಶ್ರಿತ ನೀರು ಧಾರವಾಡ ಜಿಲ್ಲೆಯ ತುಪ್ಪರಿಹಳ್ಳವನ್ನು ಸೇರುತ್ತಿದೆ. ಕೆಮಿಕಲ್ ಮಿಶ್ರಿತ ನೀರು ಸೇರಿದ ತುಪ್ಪರಿ ಹಳ್ಳದ ನೀರನ್ನು ಜಾನುವಾರುಗಳು ಕುಡಿದಿವೆ ಈ ಕಾರಣಕ್ಕೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಚೆನ್ನಾಗಿ ಮಳೆ ಆಗಿರುವ ಹಿನ್ನೆಲೆಯಲ್ಲಿ ತುಪ್ಪರಿ ಹಳ್ಳದಲ್ಲಿ ನೀರು ಹರಿಯುತ್ತಿದೆ. ಈ ಕೆಮಿಕಲ್ ನೀರು ನೇರವಾಗಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಮತ್ತು ಐಯಟ್ಟಿ ಭಾಗದಲ್ಲಿ ಸಣ್ಣ ಹಳ್ಳದ ಮೂಲಕ ತುಪ್ಪರಿಹಳ್ಳವನ್ನು ಸೇರುತ್ತಿದೆ. ಕೆಮಿಕಲ್ ಮಿಶ್ರಿತ ನೀರು ಸೇರಿದ ಎರಡೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತು ಹೋಗಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಫ್ಯಾಕ್ಟರಿಯಲ್ಲಿ ಬಳಕೆಯಾಗುವ ಕೆಮಿಕಲ್ ಮಿಶ್ರಿತ ನೀರನ್ನು ಶುದ್ಧೀಕರಿಸದೇ, ಹಾಗೆಯೇ ಹಳ್ಳಕ್ಕೆ ಬಿಡುತ್ತಿದ್ದಾರೆ. ಹಳ್ಳದ ನೀರು ಜಿಲ್ಲೆಯ ದೊಡ್ಡ ಹಳ್ಳ ಹಾಗೂ ಬೆಣ್ಣಿಹಳ್ಳಕ್ಕೂ ಸೇರುತ್ತದೆ. ಕೆಮಿಕಲ್ ಮಿಶ್ರಿತ ನೀರು ಒಂದು ವೇಳೆ ಬೆಣ್ಣೆ ಹಳ್ಳವನ್ನು ಸೇರಿದ್ದೇ ಆದಲ್ಲಿ, ಅದು ಮತ್ತೊಂದು ಅನಾಹುತಕ್ಕೆ ಕಾರಣ ಆಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.