ಹಳೆಯ ಅನುಪಯುಕ್ತ ವಸ್ತುಗಳನ್ನು ಇಡಲು ಬಂತು ಬ್ಯಾಂಕ್!

Public TV
1 Min Read
karvara 2

– ಬಡವರಿಗೆ ಸಹಾಯವಾಗುತ್ತಿದೆ ಈ ಬ್ಯಾಂಕ್
– ವಸ್ತುಗಳನ್ನು ಇಡಲು ಯಾವುದೇ ಶುಲ್ಕವಿಲ್ಲ
– ಬೇಕಾದ ವಸ್ತಗಳನ್ನು ತೆಗೆದುಕೊಂಡು ಬಳಸಿ ಕೊಳ್ಳಬಹುದು

ಕಾರವಾರ: ಮನೆಯಲ್ಲಿ ಉಪಯೋಗವಿಲ್ಲದ ಬಟ್ಟೆ, ಪುಸ್ತಕ ಹೀಗೆ ಹಲವು ವಸ್ತುಗಳನ್ನ ಎಸೆಯುತ್ತಾರೆ. ಇಲ್ಲವೇ ಮನೆಯ ಮಾಳಿಗೆಯಲ್ಲಿ ತೆಗೆದಿರಿಸುತ್ತಾರೆ. ಆದರೆ ಇಂತಹ ವಸ್ತುಗಳನ್ನ ಮರು ಬಳಕೆ ಮಾಡುವ ಹಾಗೂ ತಮಗೆ ಮತ್ತೆ ಬೇಕಾದಾಗ ಬಳಸಿಕೊಳ್ಳಲು ಶಿರಸಿ ನಗರದ ಬನವಾಸಿ ರಸ್ತೆ ಬಳಿ ಬ್ಯಾಂಕ್ ಒಂದನ್ನು ತೆರೆಯಲಾಗಿದೆ.

ಇಂತದೊಂದು ಉತ್ತಮ ಕೆಲಸಕ್ಕೆ ಶಿರಸಿಯ ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್ ಮುಂದಾಗಿದ್ದು ಮೊದಲ ಹಂತದಲ್ಲಿ ಬ್ಯಾಂಕ್ ಅನ್ನು ತೆರೆಯಲಾಗಿದೆ. ಶಿರಸಿಯ ಮಲ್ಲಿಕಾರ್ಜುನ್ ನಜ್ಜೂರು ಹಾಗೂ ಧನಂಜಯ್ ಗೌಡ ಈ ಬ್ಯಾಂಕ್‍ನ ನಿರ್ಮಾಣಕರ್ತರಾಗಿದ್ದಾರೆ. ಈಗಾಗಲೇ ಈ ಬ್ಯಾಂಕ್‍ನ ಸದುಪಯೋಗವನ್ನು ಜನರು ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

karvara 1

ಈ ಬ್ಯಾಂಕ್ ನಲ್ಲಿ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಉಪಯೋಗಿಸದೇ ಇಟ್ಟಿರುವ ಬಟ್ಟೆಗಳು, ಪುಸ್ತಕಗಳು, ಯಾಂತ್ರಿಕ ವಸ್ತುಗಳು ಹೀಗೆ ಯಾವ ವಸ್ತುಗಳನ್ನಾದರು ಇಲ್ಲಿ ತಂದು ಇಡಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ. ನಿಮ್ಮ ಹೆಸರನ್ನು ನೊಂದಾಯಿಸಿ ನಿಮಗೆ ನಿಗದಿ ಮಾಡಿದ ಜಾಗದಲ್ಲಿ ಈ ವಸ್ತುಗಳನ್ನು ಇಡಬಹುದು. ಹಾಗೆಯೇ ನಿಮಗೆ ಬೇಕು ಎನಿಸಿದಾಗ ಇಲ್ಲಿಗೆ ಬಂದು ತೆಗೆದುಕೊಂಡು ಹೋಗಬಹುದು. ಬೇಡವೆಂದಾದರೇ ಯಾರಿಗೆ ಈ ವಸ್ತುಗಳು ಅವಷ್ಯವಿದೆಯೋ ಅವರು ಬಂದು ತೆಗೆದುಕೊಂಡು ಬಳಸಬಹುದಾಗಿದೆ. ಇದಕ್ಕೆ ಯಾವ ಶುಲ್ಕವನ್ನು ಸಹ ಬರಿಸಬೇಕಿಲ್ಲ.

ಈ ಬ್ಯಾಂಕ್ ನಲ್ಲಿ ಹಳೆಯ ವಸ್ತುಗಳು, ಬಟ್ಟೆಗಳು, ಪುಸ್ತಕಗಳು ಈಗಾಗಲೇ ಠೇವಣಿ ರೂಪದಲ್ಲಿ ಇಡಲಾಗಿದೆ. ಹಲವರು ಬೇರೆಯವರಿಗೆ ಉಪಯೋಗಕ್ಕೆ ಬಳಸಲು ಅನುಮತಿ ಸಹ ನೀಡಿದ್ದಾರೆ. ಹೀಗಾಗಿ ಹಲವು ಉಪಯೋಗಿಸಿ ಇಟ್ಟ ಬಟ್ಟೆಯನ್ನು ಇಲ್ಲಿಂದ ನಿರ್ಗತಿಕರು ಒಯ್ಯುತಿದ್ದಾರೆ. ಪುಸ್ತಕಗಳು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಓದಲು ಸಹಾಯವಾಗುತಿದೆ. ಈ ಹೊಸ ಪ್ರಯೋಗ ಈಗ ಜಿಲ್ಲೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *