ಹಾಸನ: ಹಳೆಬೀಡಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಎಡವಟ್ಟಾಗಿದ್ದು ಹಲವು ವಿಗ್ರಹಗಳಿಗೆ ಹಾನಿಯಾಗಿದೆ.
ಸ್ಮಾರಕದ ಸುತ್ತ ಬೆಳೆದಿದ್ದ ಅನುಪಯುಕ್ತ ಕಳೆ ತೆಗೆದು ಸ್ವಚ್ಛಗೊಳಿಸುವ ಕೆಲಸವನ್ನು ಸುಲಭ ಮಾಡಿಕೊಳ್ಳುವ ಸಲುವಾಗಿ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಎಡವಟ್ಟಾಗಿದ್ದು, ಅತ್ಯಮೂಲ್ಯ ವಿಗ್ರಹಗಳು ಸುಟ್ಟು ಮಸಿ ಹಿಡಿದು ಮೂಲ ರೂಪ ಕಳೆದುಕೊಂಡಿದೆ.
Advertisement
Advertisement
ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ ಕಾರ್ಮಿಕರು ಈ ಅಚಾತುರ್ಯ ಎಸಗಿದ್ದಾರೆ. ಬಿಸಿಲಿಗೆ ಒಣಗಿದ್ದ ಗಿಡ-ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು ಕೆರೆ ದಂಡೆಯಲ್ಲಿದ್ದ ಹುಚ್ಚೇಶ್ವರ(ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ.
Advertisement
Advertisement
ಘಟನೆಯ ತರುವಾಯ ಸಿಬ್ಬಂದಿ ಹಾಗೂ ಕಾರ್ಮಿಕರು ನೀರು ಹಾಕಿ ಬೆಂಕಿಯನ್ನು ಆರಿಸಿದರೂ ವಿಗ್ರಹಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಆಗಿಲ್ಲ. ಜೈನ ಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಸುತ್ತಲು ಬೆಳೆದಿದ್ದ ಗಿಡಗಂಟೆ ನಾಶಪಡಿಸಲು ಬೆಂಕಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ವಿಗ್ರಹಗಳು ಕರಕಲಾಗಿವೆ. ಉತ್ಖನನ ಕಾರ್ಯದಲ್ಲಿ ಪಾಲ್ಗೊಂಡವರು ವಿಗ್ರಹಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಉತ್ಖನನ ಮಾಡಿ ಪ್ರಯೋಜನವೇನು ಎಂದು ಸ್ಥಳೀಯರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.