– ಪಂಜುರ್ಲಿ, ಕಲ್ಕುಡ ದೈವಕ್ಕೆ ದೂರು ನೀಡಿದ ಶಂಕರ್ ಶಾಂತಿ
– ಕಾಳಿಕಾಂಬ ದೇಗುಲದಲ್ಲಿ ಶಾಪದ ಕಾಯಿ ಒಡೆದ ಆರ್‌ಟಿಐ ಕಾರ್ಯಕರ್ತ
ಉಡುಪಿ: ಮಾರಣಾಂತಿಕ ಹಲ್ಲೆಗೊಳಗಾದ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಬಾರಕೂರಿನ ಆರ್‌ಟಿಐ ಕಾರ್ಯಕರ್ತ ಶಂಕರ್ ಶಾಂತಿ ದೈವ ದೇವರ ಮೊರೆ ಹೋಗಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಕೈಯಲ್ಲಿ ಕರ್ಪೂರ ಸುಟ್ಟು ಶಾಪ ಹಾಕಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆಸಿದವರು ಸರ್ವನಾಶವಾಗಲಿ ಎಂದು ಆರ್‌ಟಿಐ ಕಾರ್ಯಕರ್ತ ಶಂಕರ್ ಶಾಂತಿ ಉಡುಪಿಯ ಬಾರ್ಕೂರು ಕಾಳಿಕಾಂಬಾ ದೇವಸ್ಥಾನದಲ್ಲಿ ಶಾಪ ಹಾಕಿ ತೆಂಗಿನಕಾಯಿ ಒಡೆದಿದ್ದಾರೆ. ತಿಂಗಳ ಹಿಂದೆ ಶಂಕರ್ ಶಾಂತಿ ಅವರ ಮೇಲೆ ಕಾಳಿಕಾಂಬ ದೇವಸ್ಥಾನದಲ್ಲಿ ದುಷ್ಕರ್ಮಿಗಳು ದಾಳಿ ಮಾಡಿ ಎರಡು ಕಾಲು, ಒಂದು ಕೈ ಮುರಿದು ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸರ್ಕಾರಿ ಆಸ್ತಿ ಕಬಳಿಕೆ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದ ಶಂಕರ್ ಶಾಂತಿ ಮೇಲೆ ಕೆಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆಯಾಗಿಲ್ಲ. ಮುಖ್ಯ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ದೇಗುಲದಲ್ಲಿ ಶಂಕರ್ ಶಾಂತಿ ಆರೋಪಿಸಿದ್ದಾರೆ. ದೇವಸ್ಥಾನಕ್ಕೆ ತನ್ನ ವಿರೋಧಿಗಳನ್ನು ಪ್ರಮಾಣ ಮಾಡಲು ಕರೆದಿದ್ದ ಶಂಕರ್ ಶಾಂತಿ ಯಾರೂ ಬಾರದ ಹಿನ್ನೆಲೆಯಲ್ಲಿ ದೇವರಿಗೆ ಕಾಯಿ ಒಡೆಯುವ ಮೂಲಕ ವಿಶೇಷವಾಗಿ ದೂರು ಸಲ್ಲಿಸಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆಸಿರುವವರು ಸರ್ವನಾಶವಾಗಿ ಹೋಗಲಿ. ನಾನು ಒದ್ದಾಡಿದಂತೆ ಅವರೂ ರಕ್ತದ ಮಡುವಿನಲ್ಲಿ ಒದ್ದಾಡಿ ಸಾಯಲಿ ಎಂದು ಆಕ್ರೋಶ ಭರಿತರಾಗಿ ಪಂಜುರ್ಲಿ ಮತ್ತು ಕಲ್ಕುಡ ದೈವದ ಮುಂದೆ ಕರ್ಪೂರ ಸುಟ್ಟು ತೆಂಗಿನಕಾಯಿ ಒಡೆದಿದ್ದಾರೆ.