– ಮೊದಲು ಪಾಸಿಟಿವ್, ಈಗ ನೆಗೆಟಿವ್
ತಿರುವನಂತಪುರ: ಹಲಸಿನ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿತ್ತು. ಇದೀಗ ವ್ಯಕ್ತಿಯ ರಿಪೋರ್ಟ್ ನೆಗೆಟಿವ್ ಬಂದಿದ್ದು, ಕಾಸರಗೋಡಿನ ಜನತೆ ನಿರಾಳರಾಗಿದ್ದಾರೆ.
ಕೋವಿಡ್-19 ಸೋಂಕು ತಗುಲಿದೆ ಎಂದಾಗ ಆತನಿಗೆ ಕೊರೊನಾ ಹೇಗೆ ತಗುಲಿತು ಎಂಬ ಪ್ರಶ್ನೆಗೆ ಕೇರಳ ಆರೋಗ್ಯ ಇಲಾಖೆ ಉತ್ತರ ಹುಡುಕುವಲ್ಲಿ ಸುಸ್ತಾಗಿತ್ತು. ಕಾರಣ ವ್ಯಕ್ತಿ ಯಾವ ಸೋಂಕಿತನ ಸಂಪರ್ಕಕ್ಕೂ ಬಂದಿರಲಿಲ್ಲ. ಯಾವುದೇ ಪ್ರಯಾಣದ ಹಿನ್ನೆಲೆಯನ್ನು ಹೊಂದಿರಲಿಲ್ಲ. ಆರೋಗ್ಯ ಇಲಾಖೆಗೆ ಸೋಂಕಿನ ಮೂಲ ಪತ್ತೆ ಹಚ್ಚೋದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ ವ್ಯಕ್ತಿಯ ವರದಿ ನೆಗೆಟಿವ್ ಬಂದಿದ್ದು, ಆರೋಗ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.
Advertisement
Advertisement
ಯಾರು ಈ ವ್ಯಕ್ತಿ? ಕಾಸರಗೋಡು ಜಿಲ್ಲೆಯ ಬೇಲೂರು ಪಂಚಾಯ್ತಿ ವ್ಯಾಪ್ತಿಯ ನಿವಾಸಿಯಾಗಿರೋ ಈ ವ್ಯಕ್ತಿ ವೃತ್ತಿಯಲ್ಲಿ ಆಟೋ ಚಾಲಕ. ಮರವೇರಿ ಹಲಸಿನ ಹಣ್ಣು ಕೀಳುವಾಗ ಆಯತಪ್ಪಿ ಬಿದ್ದಿದ್ದರು. ಈ ವೇಳೆ ವ್ಯಕ್ತಿಯ ಬೆನ್ನುಹುರಿ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ವ್ಯಕ್ತಿಯನ್ನು ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
Advertisement
Advertisement
ವೈದ್ಯರು ಹೇಳಿದ್ದೇನು?
ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಮೊದಲಿಗೆ ಆತನನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಆತನಿಗೆ ಸೋಂಕು ತಗುಲಿರೋದು ಖಚಿತವಾಯ್ತು. ಆದ್ರೆ ಸೋಂಕಿನ ಮೂಲವೇ ತಿಳಿಯಲಿಲ್ಲ. ಆತನಲ್ಲಿ ಕೆಲ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಡಾ. ಕೆ. ಸುದೀಪ್ ಹೇಳಿದ್ದರು.
ಸೋಮವಾರ ಆಟೋ ಚಾಲಕನಿಗೆ ಕೊರೊನಾ ಎಂದು ಹೇಳುತ್ತಲೇ, ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 18 ಜನರನ್ನು ಗುರುತಿಸಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಈ 18 ಜನರ ಪ್ರಾಥಮಿಕ ಸಂಪರ್ಕದಲ್ಲಿರುವ ಜನರನ್ನು ಗುರುತಿಸುವ ಕೆಲಸ ಸಹ ನಡೆದಿತ್ತು.