– ಅಪಾರ ಪ್ರಮಾಣದ ಬೆಳೆ ನಾಶ
– ಹಲವು ಸೇತುವೆಗಳು ಮುಳುಗಡೆ
ರಾಯಚೂರು/ಬೀದರ್: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಭಾಲ್ಕಿ ತಾಲೂಕಿನ ಆನಂದವಾಡಿ ಸೇತುವೆ ಮುಳುಗಡೆಯಾಗಿ ನಾಲ್ಕು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇತ್ತ ರಾಯಚೂರಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
Advertisement
ರಾಯಚೂರು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣ ಹಾಳಾಗುವ ಭೀತಿ ಎದುರಾಗಿದೆ. ರಾಯಚೂರು ತಾಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿರೋ ಮಳೆಯಿಂದ ಕೆರೆ ಕೋಡಿ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಜಮೀನಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾಳಾಗಿದ್ದು, ಮೊಣಕಾಲುವರೆಗೂ ಜಮೀನಿನಲ್ಲಿ ನೀರು ನಿಂತಿರುವುದರಿಂದ ಚೆನ್ನಾಗಿ ಬೆಳೆದಿದ್ದ ಬೆಳೆ ಹಾಳಾಗಿವೆ.
Advertisement
Advertisement
ಸಿಂಧನೂರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ರಸ್ತೆ ಮೇಲೆ ನೀರು ಹರಿದು ಓಡಾಟಕ್ಕೆ ತೊಂದರೆಯುಂಟಾಗಿದೆ. ರಾಯಚೂರಿನ ಎಸ್‍ಪಿ ಕಚೇರಿ ಬಳಿ ಮರ ನೆಲಕ್ಕುರುಳಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.
Advertisement
ಬೀದರ್‌ನಲ್ಲೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವು ಸೇತುವೆಗಳು ಮುಳುಗಡೆಯಾಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ತಡರಾತ್ರಿ ಕಮಲಾನಗರ ತಾಲೂಕು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದ್ದು, ತಾಲೂಕಿನ ಸೋನಾಳ್, ಲಖಣ್ ಗಾಂವ್ ಹಾಗೂ ಬೆಳಕುಣಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಜೊತೆಗೆ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣ ಬಂದಾಗಿದೆ. ಔರಾದ್ ತಾಲೂಕಿನ ಚಂದಾಪೂರ್ ಸೇತುವೆ ಬಳಿಯ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಹಾ ಮಳೆಗೆ ನಾಶವಾಗಿದೆ. ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಮೀಲಿ ಮೀಟರ್ ಮಳೆಯಾಗಿದ್ದು, ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಹಾಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಬಳ್ಳಾರಿಯ ಹೊಸಪೇಟೆ ತಾಲೂಕಿನ ಡಣಾಯಕನ ಕೆರೆ ಕೋಡಿ ಒಡೆದು ನೂರಾರು ಎಕರೆ ಬೆಳೆಗೆ ನೀರು ನುಗ್ಗಿದೆ. ಕಳೆದ ವಾರ ಸುರಿದ ಮಳೆ ಕೆರೆ ಭರ್ತಿಯಾಗಿತ್ತು. ಈಗ ಮತ್ತೆ ಮಳೆಯಾಗಿದ್ದರಿಂದ ಕೋಡಿ ಒಡೆದು ಉತ್ತಮವಾಗಿ ಬೆಳದ ಫಸಲಿಗೆ ನೀರು ನುಗ್ಗಿದೆ. ಮೆಕ್ಕೆಜೋಳ, ಈರುಳ್ಳಿ, ಭತ್ತೆ ಸೇರಿದಂತೆ ನಾನಾ ಬೆಳೆಗಳಿಗೆ ಕೆರೆ ನೀರು ನುಗ್ಗಿದೆ. ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಾಗಿನಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿಯಿರುವ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಕಲಬುರಗಿ- ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ.