– ಕುಟುಂಬಸ್ಥರ ಮಾತು ಕೇಳದ ತಂಗಿಗೆ ಕೊಲೆಯ ಶಿಕ್ಷೆ
ಜೈಪುರ: ತಾನು ಪ್ರೀತಿ ಮಾಡಿದಾತನನ್ನು ಮದುವೆಯಾಗುತ್ತೇನೆ ಎಂದ ಸಹೋದರಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಆರೋಪಿ ಸಹೋದರನನ್ನು ಪವನ್(24) ಎಂದು ಗುರುತಿಸಲಾಗಿದೆ. ಅಣ್ಣ-ತಂಗಿ ಇಬ್ಬರೂ ರಾಜಸ್ಥಾನದ ಅಲ್ವಾರ್ ಪಟ್ಟಣದ ಭಿವಾಡಿ ನಿವಾಸಿಗಳಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಏರ್ ಕಂಡೀಷನರ್ ರಿಪೇರಿ ಮಾಡುವ ಅಂಗಡಿ ಹೊಂದಿದ್ದನು. ಯುವತಿಯ ಪ್ರಿಯತಮ ವಿಷ್ಣು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಪವನ್ ತನ್ನ ತಂಗಿಯ ತಲೆಯನ್ನು ಹಿಡಿದು ಹಲವು ಬಾರಿ ನೆಲಕ್ಕೆ ಬಡಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ವಿಷ್ಣು ಹಾಗೂ ಯುವತಿ ಒಂದೇ ಸಮುದಾಯದವರಾಗಿದ್ದರಿಂದ ಅವರಿಗೆ ಜಾತಿ ಅಡ್ಡ ಬಂದಿರಲಿಲ್ಲ. ಆದರೆ ಅಣ್ಣನೇ ಇವರಿಬ್ಬರನ್ನು ಒಂದು ಮಾಡಲು ಒಪ್ಪದೆ ಈ ಕೃತ್ಯ ಎಸಗಿದ್ದಾನೆ.
ಯುವತಿ ಹಾಗೂ ವಿಷ್ಣು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರಿಬ್ಬರ ಮದುವೆಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ವಿಷ್ಣು, ಪವನ್ ಅಂಗಡಿಯಲ್ಲಿ ಕೆಲಸ ಬಿಟ್ಟಿದ್ದನು. ಈ ಮಧ್ಯೆ ಯುವತಿಯ ಕುಟುಂಬಸ್ಥರು ಆಕೆಗೆ ಸೂಕ್ತ ವರನ ಹುಡುಕಾಟದಲ್ಲಿ ತೊಡಗಿದ್ದರು.
ಇತ್ತ ಯುವತಿ ಮಾತ್ರ ವಿಷ್ಣುವನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದಿದ್ದಳು. ಈಕೆಯ ನಿರ್ಧಾರದಿಂದ ಕುಟುಂಬಸ್ಥರು ಬೇಸತ್ತಿದ್ದರು. ಅಲ್ಲದೆ ಕುಟುಂಬವರ ಮಾತು ಕೇಳದಿದ್ದರಿಂದ ಕೋಪೋದ್ರಿಕ್ತನಾದ ಸಹೋದರ ಆಕೆಯ ತಲೆಯನ್ನು ನೆಲಕ್ಕೆ ಬಡಿದು ಕೊಂದೇ ಬಿಟ್ಟಿದ್ದಾನೆ.