ಹಲವು ಪಾಠಗಳನ್ನು ಕಲಿಸಿದ ವರ್ಷಕ್ಕೆ ಗುಡ್‌ಬೈ ಹೇಳಿ 2021ನ್ನು ಸ್ವಾಗತಿಸೋಣ

Public TV
2 Min Read
sand artist sudarsan pattnaik main

ಕೊರೊನಾ, ಕೋವಿಡ್‌ 19, ಚೀನಿ ವೈರಸ್‌, ಲಾಕ್‌ಡೌನ್‌, ವರ್ಕ್‌ ಫ್ರಂ ಹೋಮ್‌, ಸೀಲ್‌ಡೌನ್‌, ಲಸಿಕೆ …ಈ ಪದಗಳನ್ನು ಕಳೆದ 9 ತಿಂಗಳಿನಿಂದ ಕೇಳುತ್ತಾ 2020 ಕಳೆದು ಹೋಗಿ 2021 ಬಂದಿದೆ. ಈಗಾಗಲೇ 2020ರ ವರ್ಷವನ್ನು ಕೊರೊನಾ ವರ್ಷ, ಕರಾಳ ವರ್ಷ, ಶತಮಾನದ ದುರಂತ ವರ್ಷಗಳಲ್ಲಿ ಇದು ಒಂದು ಎಂದು ಹಲವು ಕಡೆ ಬಣ್ಣಿಸಲಾಗುತ್ತದೆ. 2020 ಹಲವು ಕಷ್ಟಗಳನ್ನು ತಂದಿರುವುದು ನಿಜ. ಆದರೆ 2020 ವಿಶ್ವಕ್ಕೇ ಹಲವು ಪಾಠಗಳನ್ನು ಕಲಿಸಿದ ವರ್ಷ ಎಂದರೆ ತಪ್ಪಾಗಲಾರದು.

ಜೀವನಲ್ಲಿ ಸಮಸ್ಯೆ ಪ್ರತಿಯೊಬ್ಬರಿಗೆ ಬರುತ್ತದೆ. ಆದರೆ ಬಂದ ಸಮಸ್ಯೆಯನ್ನು ಹೇಗೆ ನಾವು ಬಗೆ ಹರಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಜೀವನ ನಿಂತಿದೆ. ಆರಂಭದಲ್ಲಿ ಕಷ್ಟವಾದರೂ ನಂತರ ನಾವು ಈ ಪರಿಸ್ಥಿತಿಗೆ ಒಗ್ಗಿ ಹೋಗಿದ್ದೇವೆ. ಬದಲಾವಣೆ ನಿರಂತರ ಎಂಬಂತೆ ಕೊರೊನಾದಿಂದಾಗಿ ಬದಲಾದ ವ್ಯವಸ್ಥೆಯ ಭಾಗದಲ್ಲಿ ನಾವೆಲ್ಲರೂ ಸೇರಿ ಹೋಗಿದ್ದೇವೆ.

ಶಾಲೆಗಳು ನಡೆಯದಿದ್ದರೂ ಮನೆಯಿಂದಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಕಂಪನಿಗಳಿಗೆ ತೆರಳದಿದ್ದರೂ ಉದ್ಯೋಗಿಗಳು ವರ್ಕ್‌ ಫ್ರಂ ಹೋಮ್‌ ಮೂಲಕ ಕೆಲಸ ಮಾಡುತ್ತಿದ್ದಾರೆ. ಕೈಕಟ್ಟಿ ಕುಳಿತರೆ ಯಾವ ಕೆಲಸ ಆಗುವುದಿಲ್ಲ. ವೃತ್ತಿಯಲ್ಲಿ ಮೇಲಿಲ್ಲ ಕೀಳಿಲ್ಲ. ನಾವು ಹೇಗೆ ಮಾಡುತ್ತೇವೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ಈ ಮಾತಿನಂತೆ ಹಿಂದೆ ಬಾಡಿಗೆ ಕಾರು, ರಿಕ್ಷಾಗಳನ್ನು ಓಡಿಸುತ್ತಿದ್ದ ವ್ಯಕ್ತಿಗಳು ತರಕಾರಿ/ ಹಣ್ಣುಗಳನ್ನು ಖರೀದಿಸಿ ನಗರಗಳಲ್ಲಿ ಮಾರಾಟ ಮಾಡಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಮನೆಯಲ್ಲಿ ಮೊಮ್ಮಕ್ಕಳ ಜೊತೆ ಅಜ್ಜ, ಅಜ್ಜಿ ಆಟವಾಡುವುದರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಸಂಭ್ರಮವನ್ನು ಪೋಷಕರು ನೋಡಿ ಆನಂದಿಸುತ್ತಿದ್ದಾರೆ. ಊರಿನಿಂದ ನಗರಕ್ಕೆ ಉದ್ಯೋಗಕ್ಕೆ ಬಂದವರು ಈಗ ಊರಿಗೆ ಮರಳಿದ್ದಾರೆ. ಹೊರಗಡೆ ಹೋಗಿ ಬಂದ ನಂತರ ಕೈ, ಕಾಲು ತೊಳೆಯುತ್ತಿದ್ದೇವೆ. ಜೀವನದಲ್ಲಿ ಸ್ವಚ್ಛತೆಯ ಪಾಠವನ್ನು ಕಲಿತಿದ್ದೇವೆ. ಹೀಗೆ ಕೊರೊನಾ ಪ್ರತಿಯೊಬ್ಬರಿಗೂ ಒಂದೊಂದು ಪಾಠವನ್ನು ಕಲಿಸಿದೆ.

ಸಾಧ್ಯವಿಲ್ಲ ಎಂದರೆ ಯಾವುದು ಸಾಧ್ಯವಿಲ್ಲ. ಆಗುವುದೆಲ್ಲ ಒಳ್ಳೆಯದ್ದಕ್ಕೆ, ಥಿಂಕ್‌ ಪಾಸಿಟಿವ್‌ ಎಂದು ಯೋಚಿಸಿದರೆ ಸಮಸ್ಯೆ ಬಂದರೂ ಅದಕ್ಕೆ ಪರಿಹಾರವಿದೆ. 2020 ವಿಶ್ವಕ್ಕೆ ಕಷ್ಟ ತಂದಿರುವುದು ಎಷ್ಟು ಸತ್ಯವೋ ಅದೇ ರೀತಿಯಾಗಿ ಹಲವು ಅವಕಾಶಗಳನ್ನು ಸೃಷ್ಟಿಸಿದೆ ಎನ್ನುವುದು ಸತ್ಯ. ಈ ಅವಕಾಶವನ್ನು ಯಾರು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಜೀವನ ನಿಂತಿದೆ.

ಜೀವನ ನಿಂತ ನೀರಲ್ಲ. ಅದು ಹರಿಯುವ ನದಿ. ಜೀವನ ಎಂಬ ನದಿಯಲ್ಲಿ ಸುಖದೊಂದಿಗೆ ಕಷ್ಟವು ಹಿಂಬಾಲಿಸಿಕೊಂಡು ಬರುತ್ತದೆ. ಈ ಕಷ್ಟವನ್ನು ಮೆಟ್ಟಿ ನಿಂತು ಮುನ್ನಡೆದರೆ ಯಶಸ್ಸು. ಹೀಗಾಗಿ ಹಲವು ಪಾಠಗಳನ್ನು ಕಲಿಸಿದ 2020ಕ್ಕೆ ವಿದಾಯ ಹೇಳಿ 2021ನ್ನು ಪ್ರೀತಿಯಿಂದ ಬರ ಮಾಡಿಕೊಳ್ಳೋಣ.  ಥಿಂಕ್‌ ಪಾಸಿಟಿವ್‌, ಎಲ್ಲರಿಗೂ ಶುಭವಾಗಲಿ.

Share This Article
Leave a Comment

Leave a Reply

Your email address will not be published. Required fields are marked *