ಚೆನ್ನೈ: ಟೀಂ ಇಂಡಿಯಾ ಅನುಭವಿ ಆಟಗಾರ ಹರ್ಭಜನ್ ಸಿಂಗ್ ತಮಗೆ ಚೆನ್ನೈ ಮೂಲದ ಉದ್ಯಮಿಯೊಬ್ಬ 4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹರ್ಭಜನ್ ಸಿಂಗ್ ಹೊರಗುಳಿದಿದ್ದು, ಸದ್ಯ ವಂಚನೆ ಪ್ರಕರಣದ ಸಂಬಂಧ ಚೆನ್ನೈ ಪೊಲೀಸರ ನೆರವು ಕೋರಿದ್ದಾರೆ. 2015ರಲ್ಲಿ ಸ್ನೇಹಿತರೊಬ್ಬರ ಮೂಲಕದ ಪರಿಚಯವಾಗಿದ್ದ ಉದ್ಯಮಿ ಮಹೇಶ್‍ಗೆ ಹರ್ಭಜನ್ 4 ಕೋಟಿ ರೂ. ಸಾಲ ನೀಡಿದ್ದರು.
ಸಾಲ ಪಡೆದಿದ್ದ ಉದ್ಯಮಿ ಮಹೇಶ್ ಆ ಬಳಿಕ ಸಾಕಷ್ಟು ಬಾರಿ ಹರ್ಭಜನ್ ಹಣ ವಾಪಸ್ ನೀಡುವುದಾಗಿ ಸಮಯ ದೂಡಿದ್ದ. ಆದರೆ ಕಳೆದ ತಿಂಗಳು 25 ಲಕ್ಷ ರೂ.ಗಳ ಚೆಕ್ ಒಂದನ್ನು ಹರ್ಭಜನ್‍ಗೆ ನೀಡಿದ್ದ. ಆದರೆ ಉದ್ಯಮಿಯ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಇದರೊಂದಿಗೆ ಹಣ ಪಡೆಯಲು ನೇರ ಚೆನ್ನೈಗೆ ತೆರಳಿದ ಹರ್ಭಜನ್ ಪೊಲೀಸರಿಗೆ ದೂರು ನೀಡಿದ್ದರು.
ಇತ್ತ ಹರ್ಭಜನ್ ಸಿಂಗ್ ದೂರು ನೀಡಲು ಮುಂದಾಗುತ್ತಿದಂತೆ ಉದ್ಯಮಿ ಮಹೇಶ್ ಮದ್ರಾಸ್ ಹೈಕೋರ್ಟಿನಲ್ಲಿ ನಿರೀಕ್ಷಿತ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಹರ್ಭಜನ್ ಅವರು ಸಹಾಯಕ ಪೊಲೀಸ್ ಆಯುಕ್ತ ವಿಶ್ವೇಶ್ವರಯ್ಯ ಅವರಿಗೆ ತಮ್ಮ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮಾಧ್ಯಮ ವರದಿಯ ಅನ್ವಯ ಈಗಾಗಲೇ ಎಸಿಪಿ ಅವರು ಉದ್ಯಮಿ ಮಹೇಶ್‍ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಸದ್ಯ ಮದ್ರಾಸ್ ಹೈಕೋರ್ಟಿನಲ್ಲಿ ನಿರೀಕ್ಷಿತ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇದೆ.
ಈ ನಡುವೆ ಉದ್ಯಮಿ ಮಹೇಶ್ ಸಲ್ಲಿಸಿರುವ ಅಫಿಡವಿಡ್ ಅನ್ವಯ, ತಲಂಬೂರಿನಲ್ಲಿರು ಆತನ ಸ್ಥಿರ ಆಸ್ತಿಯನ್ನು ಭದ್ರತೆಯಾಗಿ ನೀಡಿ ಹರ್ಭಜನ್ ಅವರಿಂದ ಸಾಲ ಪಡೆದಿದ್ದು, ಅವರ ಪ್ರಕಾರ ಈಗಾಗಲೇ ಸಾಲವನ್ನು ಮರುಪಾವತಿ ಮಾಡಿದ್ದಾಗಿ ಹೇಳಿದ್ದಾರೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಐಪಿಎಲ್ ಟೂರ್ನಿ ಆಡುವುದರಿಂದ ಹಿಂದೆ ಸರಿದಿರುವ ಹರ್ಭಜನ್, ಸುಮಾರು 2 ಕೋಟಿ ರೂ.ಗಳನ್ನು ಕಳೆದುಕೊಳ್ಳಲಿದ್ದಾರೆ. ಇಂತಹ ಸಂದರ್ಭದಲ್ಲೇ ತಾವು ನೀಡಿದ್ದ ಹಣವನ್ನು ಕಾನೂನಿನ ಮೂಲಕ ಪಡೆಯುವ ವಾಪಸ್ ಪಡೆಯುವ ಭರವಸೆಯನ್ನು ಹೊಂದಿದ್ದಾರೆ.