ಯಾದಗಿರಿ: ರಾಜ್ಯದಲ್ಲಿ ಮೌಢ್ಯ ನಿರ್ಬಂಧ ಕಾಯ್ದೆ ಜಾರಿಯಲ್ಲಿದ್ದರೂ ದೇವರ ಹೆಸರಿನಲ್ಲಿ ಅಮಾಯಕರ ಶೋಷಣೆ ಮಾತ್ರ ನಿಲ್ಲುತ್ತಿಲ್ಲ. ಅನಾಗರಿಕ ಅನಿಷ್ಟ ಪದ್ಧತಿಗಳು ಇನ್ನೂ ರಾಜ್ಯದಲ್ಲಿ ತಂಡವಾಡುತ್ತಿದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹೊರ ವಲಯದಲ್ಲಿ ಹರಕೆಯ ನೆಪದಲ್ಲಿ ಮಹಿಳೆಯರ ಬೆತ್ತಲೆ ಸೇವೆ ನಡೆದಿದ್ದು, ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಂಗಳವಾರ ಹಿನ್ನೆಲೆ ಕೆಲ ಸಮುದಾಯಗಳು ದೇವರಿಗೆ ಹರಕೆ ತೀರಿಸುವ ನೆಪದಲ್ಲಿ ಹೆಣ್ಣುಮಕ್ಕಳ ಅರೇ ಬೆತ್ತಲೆ ಮಾಡಿ ದೇಹಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ಸಹ ಮಾಡಿದ್ದಾರೆ. ಇಷ್ಟೇ ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿಬಲಿ ಸಹ ನಡೆಸಲಾಗಿದೆ.
ಜಿಲ್ಲೆಯ ಖಾನಾಪುರ, ಗುಂಡಗುರ್ತಿ, ಬಿಜಾಸಪುರ ಸೇರಿದಂತೆ ಬಹುತೇಕ ಕಡೆ ಇದೆ ರೀತಿಯ ಆಚರಣೆ ನಡೆದಿದೆ. ಸುರಪುರ ಪಟ್ಟಣದಲ್ಲಿಯೆ ಇಂತಹ ಅನಿಷ್ಟ ಪದ್ಧತಿಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತ್ತಿರುವುದು ವಿಪರ್ಯಾಸದ ಸಂಗತಿ.