ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ ಆಗುವುದರಲ್ಲಿ ರಾಯಚೂರು ನಂ.1

Public TV
2 Min Read
Ambulance Delivery

ರಾಯಚೂರು: ಕೆಟ್ಟ ರಸ್ತೆಗಳನ್ನ ಕಂಡಾಗ ಗರ್ಭಿಣಿಯರಿಗೆ ಇಲ್ಲೆ ಹೆರಿಗೆಯಾಗಿ ಬಿಡುತ್ತೆ ಅಂತ ಉದ್ಘಾರ ತೆಗೆಯುವುದು ಸಾಮಾನ್ಯ. ಆದರೆ ಅದು ರಾಯಚೂರು ಪಾಲಿಗೆ ಬಹುತೇಕ ನಿಜವಾಗಿದೆ. ಯಾಕಂದ್ರೆ ರಾಯಚೂರಿನ ರಸ್ತೆಗಳಲ್ಲೇ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ನೀವು ಗಾಬರಿಯಾಗದೆ ಇರಲ್ಲ. ಆಸ್ಪತ್ರೆ ಸೇರುವ ಮುನ್ನವೇ ಅಂಬುಲೆನ್ಸ್ ನಲ್ಲಿ ಹೆರಿಗೆಯಾಗುವುದರಲ್ಲಿ ರಾಜ್ಯದಲ್ಲೇ ರಾಯಚೂರು ಈಗ ನಂಬರ್ 1 ಆಗಿದೆ.ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಸುಲಭ ಹೆರಿಗೆ ಮಾಡುವ ಮೂಲಕ ರಾಜ್ಯದಲ್ಲಿ ನೂರಾರು ಹೆರಿಗೆಗಳನ್ನ ಮಾಡಿಸಿ ತಾಯಿ, ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆ ಈಗ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಅಂಬುಲೆನ್ಸ್ ಕೊರತೆ ಸೇರಿ ನಾನಾ ಕಾರಣಗಳಿರಬಹುದು ಅದರಲ್ಲಿ ಹದಗೆಟ್ಟ ರಸ್ತೆಗಳೇ ಪ್ರಮುಖ ಪಾತ್ರ ವಹಿಸಿವೆ.

Ambulance Delivery 5

2020 ಜನವರಿಯಿಂದ ಸೆಪ್ಟೆಂಬರ್ ವರೆಗೆ ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಇದುವರೆಗೂ ರಾಜ್ಯದಲ್ಲಿ ಒಟ್ಟು 635 ಹೆರಿಗೆಗಳನ್ನು ಮಾಡಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆಯಲ್ಲಿ 81 ಹೆರಿಗೆಗಳು ಆಗಿದ್ದು, ಅಂಬುಲೆನ್ಸ್ ನಲ್ಲಿ ಹೆರಿಗೆ ಆಗುವುದರಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಲಬುರಗಿಯಲ್ಲಿ 76 ಹೆರಿಗೆಗಳು ಆಗುವ ಮೂಲಕ 2ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಆಸ್ಪತ್ರೆಗಳು ಹತ್ತಿರ ಸಿಗುವುದರಿಂದ ಅಂಬುಲೆನ್ಸ್ ನಲ್ಲಿ 11 ಹೆರಿಗೆಗಳು ಮಾತ್ರ ನಡೆದಿವೆ. ಬಳ್ಳಾರಿ 54, ಬೆಳಗಾವಿ 59, ವಿಜಯಪುರ 64, ಉತ್ತರ ಕನ್ನಡ 33 ಹೆರಿಗೆಗಳು ಅಂಬುಲೆನ್ಸ್ ನಲ್ಲೇ ಆಗಿದೆ. ಕೋವಿಡ್ ಸೋಂಕಿತರಿಗೂ ಸುರಕ್ಷಿತವಾಗಿ ಅಂಬ್ಯುಲೆನ್ಸ್ ನಲ್ಲೆ ಹೆರಿಗೆಯಾಗಿವೆ. ಅದೃಷ್ಟವಶಾತ್ ಇದುವರೆಗೂ ಹೆರಿಗೆಯಾದ ಎಲ್ಲಾ ತಾಯಂದಿರು ಮಕ್ಕಳು ಆರೋಗ್ಯವಾಗಿದ್ದಾರೆ. ತಜ್ಞ ವೈದ್ಯರ ಸಲಹೆ ಮೇರೆಗೆ ಆರೋಗ್ಯ ಕವಚ ಸಿಬ್ಬಂದಿಯೇ ಹೆರಿಗೆ ಮಾಡಿಸಿರುವುದು ಪ್ರಶಂಸನೀಯವಾಗಿದೆ.

Ambulance Delivery 3

ಗ್ರಾಮೀಣ ಪ್ರದೇಶದಲ್ಲಿ ದೂರದ ಆಸ್ಪತ್ರೆಗೆ ಗರ್ಭಿಣಿಯರನ್ನ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಗರ್ಭಿಣಿಗೆ ತೀವ್ರ ನೋವು ಕಾಣಸಿಕೊಂಡ ಸಂದರ್ಭದಲ್ಲಿ ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕವಚ ಸಿಬ್ಬಂದಿ ಗರ್ಭಿಣಿಯರ ಕುಟುಂಬಸ್ಥರ ಸಹಾಯದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸುತ್ತಾರೆ. ರಾಜ್ಯದಲ್ಲಿ ಆರೋಗ್ಯ ಕವಚದಡಿ ಸರಿ ಸುಮಾರು 714 ಅಂಬುಲೆನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 3,500 ಶುಶ್ರೂಷಕರು ಮತ್ತು ಡ್ರೈವರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 23 ಅಂಬುಲೆನ್ಸ್ ಗಳಿದ್ದು, 90 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

Ambulance Delivery 4

ಆದ್ರೆ ಅಂಬುಲೆನ್ಸ್‍ನಲ್ಲೆ ಹೆರಿಗೆಗಳು ಆಗುವುದು ಅಷ್ಟು ಸುರಕ್ಷಿತವಲ್ಲ ಈ ಕುರಿತು ಸರ್ಕಾರ ಹೆಚ್ಚು ಗಮನಹರಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕವಚ ಯೋಜನೆಯ ಅಂಬುಲೆನ್ಸ್ ಗಳು ಸಮಯಕ್ಕೆ ಲಭ್ಯವಾಗುತ್ತಿದ್ದರೂ ಹೆರಿಗೆಗಳು ಮಾರ್ಗ ಮಧ್ಯದಲ್ಲಿ ಆಗುತ್ತಿವೆ. ಹೀಗಾಗಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕಡೆ ಸರ್ಕಾರ ಹೆಚ್ಚು ಒತ್ತುಕೊಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *