ಲಕ್ನೋ: ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹತ್ರಾಸ್ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು ಉದ್ದೇಶಪೂರ್ವಕವಾಗಿ ಹೆಸರು ಕೆಡಿಸಲು ಮಾಡಿದ ಹುನ್ನಾರ ಎಂದು ಆರೋಪಿಸಿ ರಾಜ್ಯ ಸರ್ಕಾರ ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿದೆ.
ಉತ್ತರ ಪ್ರದೇಶ ಪೊಲೀಸರು ಈಗ ಅನಾಮಧೇಯ ವ್ಯಕ್ತಿಗಳ ವಿರುದ್ಧ 120 ಬಿ(ಕ್ರಿಮಿನಲ್ ಪಿತೂರಿ),153 ಎ(ಎರಡು ಗುಂಪುಗಳ ಮೇಲೆ ವೈಷಮ್ಯಕ್ಕೆ ಪ್ರಚೋದನೆ), 153 ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ), 195( ಸುಳ್ಳು ಸಾಕ್ಷ್ಯ ಸೃಷ್ಟಿ), 195 ಎ( ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ), 465(ಸುಳ್ಳು ಸ್ಪಷ್ಟನೆ) 468( ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 469(ಉದ್ದೇಶಪೂರ್ವಕಾಗಗಿ ಖ್ಯಾತಿಗೆ ಕುಂದು ತರಲು ಸುಳ್ಳು ಸ್ಪಷ್ಟನೆ), 501(ಮಾನಹಾನಿಕವೆಂದು ತಿಳಿದಿರುವ ವಿಷಯವನ್ನು ಮುದ್ರಿಸುವುದು) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆಗಳು) 505 ಬಿ(ವರ್ಗಗಳ ನಡುವೆ ವೈರ ದ್ವೇಷ ಅಥವಾ ವೈಮಸ್ಸು ಉಂಟುಮಾಡುವ ಹೇಳಿಕೆ) ಜೊತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಕಾರಣವಾಗಿದ್ದು justiceforhathrasvictim.carrd.co ಹೆಸರಿನ ವೆಬ್‌ಸೈಟ್ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆ ನಡೆಸಲು ಪ್ರೇರೇಪಣೆ ನೀಡಿತ್ತು ಎಂಬ ಗಂಭೀರ ಆರೋಪ ಈ ವೆಬ್‌ಸೈಟ್ ಮೇಲೆ ಬಂದಿದೆ. ಈ ವೆಬ್‌ಸೈಟಿನ ಮೂಲವನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದಂತೆ justiceforhathrasvictim.carrd.co ವೆಬ್‌ಸೈಟ್ ಕಾರ್ಯನಿರ್ವಹಿಸುವುದನ್ನು ಈಗ ನಿಲ್ಲಿಸಿದೆ.
ಈ ವೆಬ್‌ಸೈಟ್ ಸೃಷ್ಟಿಯಾದ ಕೆಲವೇ ಗಂಟೆಗಳಲ್ಲಿ ಫೇಕ್ ಐಡಿ ಮೂಲಕ ಸಾವಿರಾರು ಜನರು ಭೇಟಿ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಫೋಟೋಗಳನ್ನು, ದ್ವೇಷ ಸಾರುವ ನಕಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಎಲ್ಲಿ ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ವಿವರಗಳನ್ನು ಅಪ್ಲೋಡ್ ಮಾಡುತ್ತಿತ್ತು.
ಈ ವೆಬ್‌ಸೈಟಿಗೆ ಮುಸ್ಲಿಮ್ ರಾಷ್ಟ್ರಗಳಿಂದ ಹಣಕಾಸಿನ ನೆರವು ಬಂದಿತ್ತು ಮತ್ತು ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಲಿಂಕ್ ಸಹ ಇದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಏನಿದು ಪ್ರಕರಣ?
ಹತ್ರಾಸ್‌ನ 19 ವರ್ಷದ ದಲಿತ ಮಹಿಳೆ ಮೇಲೆ ಸೆ.14 ರಂದು 4 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆಯನ್ನು ಸೆ.28 ರಂದು ದೆಹಲಿಯ ಸಫರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮರು ದಿವಸ ಮಹಿಳೆ ಮೃತಪಟ್ಟಿದ್ದಳು.
ಸೆ.30 ರಂದು ಬೆಳಗ್ಗೆ ಮೂರು ಗಂಟೆಗೆ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಪೊಲೀಸರು ನಡೆಸಿದ್ದರು. ಈ ವೇಳೆ ಆಕೆಯ ಪೋಷಕರು ನಮ್ಮ ಅನುಮತಿ ಇಲ್ಲದೇ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಪೊಲೀಸರು ಕುಟುಂಬದವರ ಒಪ್ಪಿಗೆ ಪಡೆದು ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಹೇಳಿದ್ದರು.
ಅತ್ಯಾಚಾರ ನಡೆದಿಲ್ಲ:
ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯನ್ನು ಉಲ್ಲೇಖಿಸಿ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಿದ್ದರು. ಯುವತಿ ಸಾವಿಗೆ ಕುತ್ತಿಗೆಗೆ ಆಗಿರುವ ತೀವ್ರ ಗಾಯ ಮತ್ತು ಆಘಾತ ಎಂದು ತಿಳಿಸಿದ್ದರು.
ಎಸ್‌ಎಫ್‌ಎಲ್‌ನ ಮಾದರಿಗಳಲ್ಲಿ ವೀರ್ಯ ಇರಲಿಲ್ಲ ಎಂದು ವರದಿ ಸ್ಪಷ್ಟವಾಗಿ ಹೇಳುತ್ತದೆ. ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದರು. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮಹಿಳೆ ಕೂಡ ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಿಲ್ಲ. ಕೇವಲ ಹಲ್ಲೆ ಮಾಡಿರುವ ಬಗ್ಗೆ ಮಹಿಳೆ ಮಾತನಾಡಿದ್ದಾಳೆ ಎಂದು ಎಡಿಜಿ ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.