ಹಾಸನ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್, ಅರಸೀಕೆರೆ ನಗರಸಭೆಯ ಜೆಡಿಎಸ್ ಸದಸ್ಯರಿಗೆ 10 ಲಕ್ಷ ಹಣ ನೀಡಿ ಬಿಜೆಪಿಗೆ ಸೇರಲು ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ, ಹತ್ತು ಲಕ್ಷ ಹಣದ ಸಮೇತ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ, ಈ ಬಗ್ಗೆ ಸಿಬಿಐ ತನಿಖೆ ಮಾಡಬೇಕು. ಪೊಲೀಸ್ ದೂರು ಕೊಡುತ್ತೇವೆ. ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ. ನಾಲ್ಕೈದು ತಿಂಗಳಿನಿಂದ ನಮ್ಮ ಸದಸ್ಯರಿಗೆ ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಗೆ ಸೇರದೇ ಹೋದರೆ ನಿಮ್ಮನ್ನು ಮುಗಿಸುತ್ತೇನೆ ಅಂತಿದ್ದಾರೆ. ರಾಜ್ಯದಲ್ಲಿ ಕಾನೂನು ಇಲ್ಲ, ಅಧಿಕಾರಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ
ಬಿಜೆಪಿಗೆ ಸೇರಲು ಆಮಿಷ ಒಡ್ಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅವರ ಫೋನ್ ಕಾಲ್ ಗಳನ್ನು ಪರಿಶೀಲಿಸಬೇಕು. ಇದಕ್ಕೆ ಮುಖ್ಯಮಂತ್ರಿಯವರೇ ನೇರ ಹೊಣೆ. ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದರು.
ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದರೂ ಮೀಸಲಾತಿ ಆಧಾರದ ಮೇಲೆ ಬಿಜೆಪಿಯವರು ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಜೆಡಿಎಸ್‍ನ ಏಳು ಜನ ನಗರಸಭೆ ಸದಸ್ಯರು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಅವರಿಗೆಲ್ಲ ಹಣ ನೀಡಲಾಗಿದೆ ಎನ್ನುವುದು ರೇವಣ್ಣ ಮತ್ತು ಶಿವಲಿಂಗೇಗೌಡರ ಆರೋಪವಾಗಿದೆ.