ಮುಂಬೈ: ಹಣ್ಣು ವ್ಯಾಪಾರಿಯೊಬ್ಬ ತಾನು ವೈದ್ಯನೆಂದು ಪೋಸ್ ನೀಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ಈ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ನಕಲಿ ವೈದ್ಯನನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದ ಕಾಮತಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೈದ್ಯನಂತೆ ಪೋಸ್ ನೀಡಿದ ಚಂದನ್ ನರೇಶ್ ಚೌಧರಿ, ಕೊರೊನಾ ರೋಗಿಗಳಿಗೆ ಚಕಿತ್ಸೆ ನೀಡಿದ್ದಾನೆ. ಆರಂಭದಲ್ಲಿ ಈತ ಹಣ್ಣು ಹಾಗೂ ಐಸ್ ಕ್ರೀಮ್ ವ್ಯಾಪಾರಿಯಾಗಿದ್ದ. ಬಳಿಕ ಎಲೆಕ್ಟಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಮಾತ್ರವಲ್ಲದೆ ಓಂ ನಾರಾಯಣ ಮಲ್ಟಿಪರ್ಪಸ್ ಸೊಸೈಟಿ ಹೆಸರಿನ ಚಾರಿಟೇಬಲ್ ಔಷಧಾಲಯವನ್ನು ಸಹ ಚೌಧರಿ ನಡೆಸುತ್ತಿದ್ದಾನೆ. ಕಳೆದ 5 ವರ್ಷಗಳಿಂದ ಈತ ಈ ಔಷಧಾಲಯ ನಡೆಸುತ್ತಿದ್ದು, ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.
ಕೊರೊನಾ ಕಠಿಣ ಪರಿಸ್ಥಿತಿಯನ್ನು ಬಳಸಿಕೊಂಡ ಚೌಧರಿ, ನಾಗ್ಪುರದ ತನ್ನ ಔಷಧಾಲಯದಲ್ಲೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ. ಈತನಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ಪೊಲಿಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಚೌಧರಿಯ ಔಷಧಾಲಯದ ಮೇಲೆ ದಾಳಿ ನಡೆಸಿದ್ದು, ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್, ಸಿರಿಂಜ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ಪೊಲೀಸರು ದಾಳಿ ವೇಳೆ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಪ್ರಾಕ್ಟೀಷನರ್ಸ್ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.