– ತಾಯಿ, ಇಬ್ಬರು ಮಕ್ಕಳು ಬಾವಿಯಲ್ಲಿ ಮುಳುಗಿ ಸಾವು
ತುಮಕೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ತುಳಸಿಪುರ ಗ್ರಾಮದ ಸಮೀಪದ ತಿರುಮಲಪಾಳ್ಯದಲ್ಲಿ ನಡೆದಿದೆ.
ಕುಮಾರ್ ಅವರ ಪತ್ನಿ ಹೇಮಲತಾ (34) ಹಾಗೂ ಮಕ್ಕಳಾದ ಮಾನಸ (6), ಪೂರ್ವಿಕ (3) ಅವರೇ ಬಾವಿಗೆ ಬಿದ್ದು ಸಾವನ್ನಪ್ಪಿರುವ ದುರ್ದೈವಿಗಳು. ಇಂದು ಪೌರ್ಣಮಿ ಹಿನ್ನೆಲೆ ಮೊಸರನ್ನ ಎಡೆ ಹಿಡಿಯಲೆಂದು ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಮೊದಲನೇ ಮಗಳು ಮಾನಸ ಬಾವಿಯ ದಡದಲ್ಲಿದ್ದ ಸೀಬೆಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ನಂತರ ಜತೆಯಲ್ಲೇ ಇದ್ದ ಮತ್ತೊಂದು ಮಗು ಪೂರ್ವಿಕಾ ಸಹ ಅಕ್ಕನಂತೆಯೇ ಬಾವಿಗೆ ಬಿದ್ದಿದ್ದಾಳೆ. ತನ್ನ ಇಬ್ಬರು ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಹೇಮಲತಾ, ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ.
ದುರಾದೃಷ್ಟವಶಾತ್ ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಸರ್ಕಲ್ ಇನ್ಸ್‍ಪೆಕ್ಟರ್ ರಾಮಕೃಷ್ಣಯ್ಯ, ಕೋರಾ ಪಿಎಸ್‍ಐ ಹರೀಶ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.