ರಾಯಚೂರು: ಶಿವರಾತ್ರಿ ಹಿನ್ನೆಲೆ ಹಣ್ಣಿನ ಅಂಗಡಿ ತೆರೆದು ವ್ಯಾಪಾರ ಮಾಡುವ ವಿಚಾರಕ್ಕೆ ಜಗಳ ತೆಗೆದು ಬಾವನ ಮೇಲೆಯೇ ಬಾಮೈದುನರು ಕೊಲೆಯತ್ನ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ನಗರದ ನೇತಾಜಿ ವೃತ್ತದ ಬಳಿ ನಡೆದಿದೆ.
ಹಣ್ಣಿನ ಅಂಗಡಿ ವ್ಯಾಪಾರಿ ಜಹೀರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ತೆಂಗಿನಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಶಬ್ಬೀರ್ ಹಾಗೂ ಮೆಹಬೂಬ್ ಎಂಬವರಿಂದ ಹಲ್ಲೆ ನಡೆದಿದೆ. ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಶಬ್ಬೀರ್ ಹಣ್ಣಿನ ಅಂಗಡಿ ತೆರೆದಿದ್ದಕ್ಕೆ ಜಗಳ ಆರಂಭವಾಗಿದೆ. ಜಹೀರ್ ಅಂಗಡಿ ಪಕ್ಕದಲ್ಲೇ ಅಂಗಡಿ ತೆರೆದಿದ್ದಕ್ಕೆ ಜಗಳ ಶುರುವಾಗಿದೆ. ಈ ಹಿಂದೆ ಹಣ್ಣಿನ ವ್ಯಾಪಾರದಲ್ಲಿ ಪಾರ್ಟನರ್ಶಿಪ್ ಮುರಿದುಬಿದ್ದಿದ್ದರಿಂದ ಉಂಟಾಗಿದ್ದ ಹಳೇ ವೈಷಮ್ಯವೂ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗಾಯಾಳು ಜಹೀರ್‍ನನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಹಣ್ಣಿನ ಅಂಗಡಿ ತೆರೆಯುವ ವಿಚಾರಕ್ಕೆ ಕೊಲೆಯತ್ನ ನಡೆದಿರುವುದಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಘಟನೆ ಹಿನ್ನೆಲೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.