-ಮೊದಲ ಪತ್ನಿಯ ಒಡವೆ ಎರಡನೇ ಮಡದಿಗೆ ನೀಡಿದ್ದ
ಬೆಂಗಳೂರು: ಹಣಕ್ಕಾಗಿ ಪತಿಯ ಅಪಹರಣಕ್ಕೆ ಸುಪಾರಿ ನೀಡಿದ್ದ ಪ್ರಕರಣ ಬೇಧಿಸುವಲ್ಲಿ ನಗರದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾಗಿದ್ದ ಇಬ್ಬರು ಮಡದಿಯರ ಪತಿ ಶಾಹಿದ್ ಷೇಕ್ ನನ್ನು ಪೊಲೀಸರು ರಕ್ಷಿಸಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಸುಪಾರಿ ನೀಡಿದ್ದ ಮೊದಲ ಪತ್ನಿ ರೋಮಾ ಷೇಕ್ ಸೇರಿದಂತೆ ನಾಲ್ವರ ಬಂಧನಕ್ಕಾಗಿ ಪೊಲೀಸರು ವಿಶೇಷ ಬಲೆ ಬೀಸಿದ್ದಾರೆ.
ಅಪಹರಣಕ್ಕೊಳಗಾದ ಶಾಹಿದ್‍ಗೆ ಇಬ್ಬರು ಮಡದಿಯರು. ಮೊದಲನೇ ಮಡದಿ ರೋಮಾ ಷೇಕ್, ಎರಡನೇ ಪತ್ನಿ ರತ್ನಾ ಕಾತೂಮ್. ರೋಮಾ ಷೇಕ್ ಬಳಿಯಲ್ಲಿದ್ದ ಒಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿ ಎರಡನೇ ಪತ್ನಿ ರತ್ನಾಗೆ ನೀಡಿ ಶಾಹಿದ್ ಅಲ್ಲಿಯೇ ವಾಸವಾಗಿದ್ದನು. ಇದರಿಂದ ಕೋಪಗೊಂಡ ರೋಮಾ, ತಮ್ಮನ ಸಹಾಯದ ಮೂಲಕ ಕೆಲ ಹುಡುಗರನ್ನು ಒಗ್ಗೂಡಿಸಿ ಪತಿಯ ಅಪಹರಣಕ್ಕೆ ಪ್ಲಾನ್ ಮಾಡಿದ್ದಳು.
ಹಣಕ್ಕೆ ಡಿಮ್ಯಾಂಡ್ ಮಾಡಿದ್ಳು: ಪತಿಯನ್ನು ಅಪಹರಿಸಿ ರತ್ನಾಗೆ ಕರೆ ಮಾಡಿ ಹೆಚ್ಚು ಹಣ ಹಾಗೂ ಒಡವೆಗಳಿಗೆ ಬೇಡಿಕೆ ಇರಿಸಲು ರೋಮಾ ಆ್ಯಂಡ್ ಗ್ಯಾಂಗ್ ನಿರ್ಧರಿಸಿತ್ತು. ಪೂರ್ವ ನಿಯೋಜಿತವಾದ ಪ್ಲಾನ್ ನಂತೆ ಜೂನ್ 7ರಂದು ಎಂಇಐ ಲೇಔಟ್ ಬಳಿ ತರಕಾರಿ ಖರೀದಿಗೆ ಬಂದಿದ್ದ ಶಾಹಿದ್ ನನ್ನು ಅಪಹರಣ ಮಾಡಿ ಪರಾರಿಯಾಗಿದ್ದರು. ಪತಿಯ ಕಿಡ್ನಾಪ್ ಸುದ್ದಿ ತಿಳಿದ ರತ್ನಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಪ್ರವೃತ್ತರಾದ ಪೊಲೀಸರು ನಾಗಮಂಗಲ ತಾಲೂಕಿನ ಬಿ.ಜಿ.ಎಸ್. ಟೋಲ್ ಗೇಟ್ ಬಳಿ ಆರೋಪಿಗಳನ್ನು ಬಂಧಿಸಿ, ಶಾಹಿದ್ ಷೇಕ್ ನನ್ನು ರಕ್ಷಣೆ ಮಾಡಿದ್ದಾರೆ. ಅಭಿಷೇಕ್ (26), ಭರತ್ (25), ಪ್ರಕಾಶ್ ಕೆ.ಪಿ. (22), ಚಲುವಮೂರ್ತಿ (22) ನಾಲ್ವರನ್ನು ಬಂಧಿಸಿದ್ದಾರೆ.