– 13 ವರ್ಷದಲ್ಲೇ ಗರಿಷ್ಠ
– ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆ
ನವದೆಹಲಿ/ಜ್ಯೂರಿಚ್: ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳನ್ನು ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.
13 ವರ್ಷಗಳಲ್ಲೇ ಇದು ಗರಿಷ್ಠ ಮೊತ್ತವಾಗಿದ್ದರೂ ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಹೇಳಿದೆ.
ಬ್ಯಾಂಕ್ 2020ರ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿರುವ ಹಣವನ್ನು ಸೇರಿಸಿಲ್ಲ. ಇದನ್ನೂ ಓದಿ: ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆದಾರರ ಮೊದಲ ಪಟ್ಟಿ
2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.
ವೈಯಕ್ತಿಕ ಹಣ ಇಳಿಕೆ:
2019ರಲ್ಲಿ ಭಾರತೀಯರು ವೈಯಕ್ತಿಕವಾಗಿ 4,500 ಕೋಟಿ ರೂ. ಇಟ್ಟಿದ್ದರು. ಆದರೆ ಈಗ ಇದು 4,000 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?
ಟಾಪ್ 10 ದೇಶಗಳು:
ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪುರ, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಅನುಕ್ರಮವಾಗಿ ಟಾಪ್ 10 ಸ್ಥಾನವನ್ನು ಪಡೆದಿವೆ. ಪಟ್ಟಿಯಲ್ಲಿ ಭಾರತ 51ನೇ ಸ್ಥಾನ ಪಡೆದಿದೆ.
ಕಪ್ಪುಹಣವೇ?
ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸರ್ಕಾರಗಳಿಗೆ ನೀಡುತ್ತದೆ. ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣವೂ ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.