ಬೀದರ್: ತೆಲಂಗಾಣದಿಂದ ಬೀದರ್ ಜಿಲ್ಲೆಯ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತೆಲಂಗಾಣದಿಂದ ಜಿಲ್ಲೆಯ ಔರಾದ್ ತಾಲೂಕಿನ ನವಲಾಸಪೂರದ ರಾಷ್ಟ್ರೀಯ ಹೆದ್ದಾರಿ 9ರ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ. 28 ವರ್ಷದ ದೇವಿದಾಸ್ ರಾಠೋಡ್ ಬಂಧಿತ ಆರೋಪಿ. ಬಂಧಿತನಿಂದ 5 ಲಕ್ಷ ರೂ. ಬೆಳೆ ಬಾಳುವ 50 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಅಲ್ಲದೆ ಒಂದು ಸ್ವಿಫ್ಟ್ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಒಟ್ಟು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜನವಾಡ ಪೊಲೀಸರು ದಾಳಿ ಮಾಡಿ ಆರೋಪಿ ಹಾಗೂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಮೂಲತಃ ತೆಲಂಗಾಣದ ಸಂಗಾರೆಡ್ಡಿಗೆ ಸೇರಿದವನಾಗಿದ್ದಾನೆ. ಎಸ್‍ಪಿ ನಾಗೇಶ್ ಡಿಎಲ್ ಮಾರ್ಗದರ್ಶನ ಹಾಗೂ ಎಎಸ್‍ಪಿ ಗೋಪಾಲ್ ಬ್ಯಾಕೋಡ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.